ಭಾರತದ ಪರ ಗೋಲ್'ಕೀಪರ್ ವಿಜಯ್ ದಹಿಯಾ ಎರಡು ಬಾರಿ ಎದುರಾಳಿ ಗೋಲುಗಳಿಸುವುದನ್ನು ವಿಫಲಗೊಳಿಸುವ ಮೂಲಕ 4-2 ಗೋಲುಗಳ ಅಂತರದಲ್ಲಿ ತಂಡ ಫೈನಲ್ ತಲುಪಂತೆ ಮಾಡಲು ಯಶಸ್ವಿಯಾದರು.
ಲಖನೌ(ಡಿ.16): ತೀವ್ರ ಕುತೂಹಲ ಕೆರಳಿಸಿದ್ದ, ಜಿದ್ದಾಜಿದ್ದಿನ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಪೆನಾಲ್ಟಿ ಶೂಟೌಟ್'ನಲ್ಲಿ ಸೋಲಿಸುವ ಮೂಲಕ ಭಾರತದ ಕಿರಿಯರ ಹಾಕಿ ತಂಡ ಫೈನಲ್'ಗೆ ಲಗ್ಗೆಯಿಟ್ಟಿದೆ.
ಇಲ್ಲಿನ ಮೇಜರ್ ಧ್ಯಾನ್'ಚಂದ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ ಪರ ಟಾಮ್ ಕ್ರೇಗ್ 14 ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ತಂಡದ ಗೋಲಿನ ಖಾತೆ ತೆರೆದರು. ನಂತರ ಭಾರತ ಪರ 42ನೇ ನಿಮಿಷದಲ್ಲಿ ಗುರ್ಜಾತ್ ಸಿಂಗ್ ಗೋಲು ಗಳಿಸುವ ಮೂಲಕ ಗೋಲುಗಳ ಅಂತರವನ್ನು ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಕೆಲಹೊತ್ತಿನಲ್ಲೇ (48ನೇ ನಿಮಿಷ) ಮನ್ದೀಪ್ ಸಿಂಗ್ ಬಾರಿಸಿದ ಗೋಲು ಭಾರತಕ್ಕೆ 2-1 ಮುನ್ನಡೆ ಸಾಧಿಸುವಂತೆ ಮಾಡಿತು. ಆದರೆ ಭಾರತದ ಸಂಭ್ರಮ ಹೆಚ್ಚುಹೊತ್ತು ಉಳಿಯಲು ಆಸೀಸ್ ಆಟಗಾರ ಲಚ್ಲಾನ್ ಅವಕಾಶ ಮಾಡಿಕೊಡಲಿಲ್ಲ. ಪಂದ್ಯದ 57ನೇ ನಿಮಿಷದಲ್ಲಿ ಭಾರತದ ರಕ್ಷಣಾಕೋಟೆಯನ್ನು ವಂಚಿಸಿ ಗೋಲು ಬಾರಿಸುವಲ್ಲಿ ಲಚ್ಲಾನ್ ಸಫಲರಾದರು.
ಕಿಚ್ಚು ಹತ್ತಿಸಿದ ಪೆನಾಲ್ಟಿ ಕಾರ್ನರ್:
ಉಭಯ ತಂಡಗಳು 2-2 ಗೋಲುಗಳು ಸಮಬಲ ಸಾಧಿಸಿದ ನಂತರ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್'ಗೆ ಮೊರೆಹೋಗಬೇಕಾಯಿತು. ಆಗ ಭಾರತದ ಹರ್ಜೀತ್ ಸಿಂಗ್, ಹರ್ಮನ್'ಪ್ರೀತ್ ಸಿಂಗ್, ಸುಮೀತ್ ಹಾಗೂ ಮನ್ಪೀತ್ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಭಾರತದ ಪರ ಗೋಲ್'ಕೀಪರ್ ವಿಜಯ್ ದಹಿಯಾ ಎರಡು ಬಾರಿ ಎದುರಾಳಿ ಗೋಲುಗಳಿಸುವುದನ್ನು ವಿಫಲಗೊಳಿಸುವ ಮೂಲಕ 4-2 ಗೋಲುಗಳ ಅಂತರದಲ್ಲಿ ತಂಡ ಫೈನಲ್ ತಲುಪಂತೆ ಮಾಡಲು ಯಶಸ್ವಿಯಾದರು.
ಇನ್ನು ಫೈನಲ್'ನಲ್ಲಿ ಭಾರತ ತಂಡವು ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
