ಬೆಂಗಳೂರು(ಜು.30):  ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ 6ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ ಪಂದ್ಯಗಳನ್ನೂ ತನ್ನ ಭದ್ರಕೋಟೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲೇ ಆಡಬೇಕು ಎಂದು ತುಡಿಯುತ್ತಿದೆ. ಇದಕ್ಕಾಗಿ ಶತ ಪ್ರಯತ್ನ ನಡೆಸುತ್ತಿದೆ. ಆದರೆ ತಂಡದಿಂದ ಈ ಹಿಂದಿನ ಆವೃತ್ತಿಗಳ ವೇಳೆ ಕ್ರೀಡಾಂಗಣಕ್ಕೆ ಆಗಿದ್ದ ನಷ್ಟದಿಂದ ಸಮಸ್ಯೆಗೆ ಗುರಿಯಾಗಿದ್ದ ರಾಜ್ಯ ಕ್ರೀಡಾ ಇಲಾಖೆ ಈ ಬಾರಿ ಎಚ್ಚೆತ್ತುಕೊಂಡಿದೆ. ಬಿಎಫ್‌ಸಿ ತಂಡದ ಮಾಲೀಕರಾದ ಜೆಎಸ್‌ಡಬ್ಲ್ಯು ಸಂಸ್ಥೆ ಏನೇ ಭರವಸೆ ನೀಡಿದರೂ ಕ್ರೀಡಾಂಗಣವನ್ನು ಬಿಟ್ಟುಕೊಡಬಾರದು ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ (ಕೆಎಎ) ಪಟ್ಟು ಹಿಡಿದಿದೆ. ಕೆಎಎ ಒಪ್ಪಿದರಷ್ಟೇ ಕ್ರೀಡಾಂಗಣವನ್ನು ಫುಟ್ಬಾಲ್‌ಗೆ ಬಿಟ್ಟುಕೊಡುವುದಾಗಿ ಕ್ರೀಡಾ ಇಲಾಖೆ ಬಿಎಫ್‌ಸಿ ಮಾಲೀಕರಿಗೆ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಜೆಎಸ್‌ಡಬ್ಲ್ಯುಗೆ ಕಂಠೀರವ ಕ್ರೀಡಾಂಗಣದ ಬಾಗಿಲು ಮುಚ್ಚಿದಂತೆ ಕಾಣುತ್ತಿದೆ.

ಇದನ್ನೂ ಓದಿ: ಕನ್ನಡಪ್ರಭ ಇಂಪಾಕ್ಟ್: ಕಂಠೀರವಕ್ಕೆ ಆರ್ ಅಶೋಕ್ ಭೇಟಿ-ಅಧಿಕಾರಿಗಳಿಗೆ ಕ್ಲಾಸ್!

ಇಲಾಖೆ ಮೇಲೆ ಒತ್ತಡ!: 
ಮೂರ್ನಾಲ್ಕು ತಿಂಗಳ ಹಿಂದಷ್ಟೇ JSW ಸಂಸ್ಥೆ ಕಂಠೀರವ ಕ್ರೀಡಾಂಗಣದಿಂದ ಹೊರನಡೆದಿತ್ತು. ಕ್ರೀಡಾಂಗಣದಿಂದ ಹೊರ ಹೋಗುವ ವೇಳೆಯಲ್ಲಿಯೇ ಸಂಸ್ಥೆ, ಮತ್ತೆ ಫುಟ್ಬಾಲ್‌ ನಡೆಸಲು ಅವಕಾಶ ನೀಡಬೇಕು ಎಂದು ರಾಜ್ಯ ಕ್ರೀಡಾ ಇಲಾಖೆಯನ್ನು ಕೇಳಿಕೊಂಡಿತ್ತು. ಅಲ್ಲದೇ ತಮಗೆ ಫುಟ್ಬಾಲ್‌ ಪಂದ್ಯಗಳನ್ನು ನಡೆಸಲು ಅವಕಾಶ ಕೊಟ್ಟರೆ, ಕ್ರೀಡಾಂಗಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಅಂತಾರಾಷ್ಟ್ರೀಯ ದರ್ಜೆಗೇರಿಸುವುದಾಗಿಯೂ ಪ್ರಸ್ತಾಪ ಸಲ್ಲಿಸಿದೆ. ಆದರೆ ಇಲಾಖೆ ಇದಕ್ಕೆ ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಕಂಠೀರವ ಸಮಸ್ಯೆ ಶೀಘ್ರ ಇತ್ಯರ್ಥ: ಕ್ರೀಡಾ ಇಲಾಖೆ

‘ಸಂಸ್ಥೆ ಕ್ರೀಡಾಂಗಣವನ್ನು ತೊರೆದ ಬಳಿಕ ಸತತವಾಗಿ ಸ್ಥಳೀಯ ರಾಜಕೀಯ ನಾಯಕರಿಂದ ಆಗಾಗ್ಗೆ ಕ್ರೀಡಾ ಇಲಾಖೆಗೆ ಒತ್ತಡ ಹೇರುತಿತ್ತು’ ಎಂದು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್‌. ರಮೇಶ್‌ ‘ಕನ್ನಡಪ್ರಭ’ ಕ್ಕೆ ತಿಳಿಸಿದ್ದಾರೆ. ಕಳೆದ ಶನಿವಾರ (ಜು.27) ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಹಿರಿಯರ ಅಥ್ಲೆಟಿಕ್ಸ್‌ ಕೂಟ ನಡೆಯುತ್ತಿತ್ತು. ಮಧ್ಯಾಹ್ನ 12ರ ಸುಮಾರಿಗೆ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ, ಉದ್ಯಮಿ ಉದಯ ಗರುಡಾಚಾರ್‌ ಅವರೊಂದಿಗೆ ಜೆಎಸ್‌ಡಬ್ಲ್ಯು ಸಂಸ್ಥೆಯ ಅಧಿಕಾರಿಯೊಬ್ಬರು ಕೆಎಎ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕೆಎಎ ಕಾರ‍್ಯದರ್ಶಿ ರಾಜವೇಲು, ಸಿಇಒ ಎಲ್ವಿಸ್‌ ಜೋಸೆಫ್‌ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಕೆಎಎ ಮೂಲಗಳು ತಿಳಿಸಿವೆ.

ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ಕ್ರೀಡೆಗೂ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆಯಾ ಎಂಬುದರ ಬಗ್ಗೆ ಉದಯ ಗರುಡಾಚಾರ್‌ ವಿಚಾರಿಸಿದರು. ಆದರೆ ಬಿಎಫ್‌ಸಿಯಿಂದಾಗಿ ಅಥ್ಲೀಟ್ಸ್‌ಗಳಿಗೆ ಆಗಿರುವ ಸಮಸ್ಯೆ, ಕ್ರೀಡಾಂಗಣದ ಟ್ರ್ಯಾಕ್‌ಗೆ ಆಗಿರುವ ಹಾನಿ ಬಗ್ಗೆ ವಿವರಿಸಿದ ಬಳಿಕ ಅವರು ಮಧ್ಯಸ್ಥಿತೆ ವಹಿಸುವುದಿಲ್ಲ ಎಂದು ಹಿಂದೆ ಸರಿದರು ಎನ್ನಲಾಗಿದೆ.

ಐಎಸ್‌ಎಲ್‌ಗಷ್ಟೇ ಕೊಡಿ: JSW
ವಿಸ್ತೃತ ಅವಧಿಗೆ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ನಡೆಸಲು ಅವಕಾಶ ನೀಡಲು ಕೆಎಎ ಒಪ್ಪದಿದ್ದಾಗ ಕನಿಷ್ಠ 3 ತಿಂಗಳಾದರೂ ಅವಕಾಶ ಕಲ್ಪಿಸಿಕೊಡಿ ಎಂದು ಜೆಎಸ್‌ಡಬ್ಲ್ಯು ಅಧಿಕಾರಿ ವಿನಂತಿಸಿಕೊಂಡಿದ್ದಾರೆ. ಆದರೆ ಕೆಎಎ ಮಾತ್ರ ಯಾವುದೇ ಮನವಿಗೆ ಸ್ಪಂದಿಸುತ್ತಿಲ್ಲ. 3 ತಿಂಗಳು ಫುಟ್ಬಾಲ್‌ಗೆ ಅವಕಾಶ ನೀಡಿದರೆ, ಆ ಸಮಯದಲ್ಲಿ ಅಥ್ಲೀಟ್‌ಗಳು ಎಲ್ಲಿ ಅಭ್ಯಾಸ ನಡೆಸಬೇಕು ಎಂದು ಕೆಎಎ ಪ್ರಶ್ನಿಸಿದೆ.

‘ಈ ಹಿಂದೆ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಜೆಎಸ್‌ಡಬ್ಲ್ಯು, ಅಥ್ಲೆಟಿಕ್ಸ್‌ ಸಂಸ್ಥೆ ಅಧಿಕಾರಿಗಳನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ. ಮೈದಾನದ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ಅಥ್ಲೀಟ್‌ಗಳಿಗೆ ನಿರ್ಬಂಧ ಹೇರಿತ್ತು. ಕೆಲವೊಮ್ಮೆ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಅಭ್ಯಾಸಕ್ಕೆ ಅಡ್ಡಿಪಡಿಸಿತ್ತು. ಅಲ್ಲದೇ 2018ರ ಮೇ.31ಕ್ಕೆ ಒಪ್ಪಂದದ ಅವಧಿ ಪೂರ್ಣಗೊಂಡಿದ್ದರೂ, 8 ತಿಂಗಳು ಹೆಚ್ಚಿಗೆ ಕ್ರೀಡಾಂಗಣವನ್ನು ಬಳಸಿತ್ತು. ಹೀಗಾಗಿ ಜೆಎಸ್‌ಡಬ್ಲ್ಯು ನೀಡಿದ ಬೇಡಿಕೆಯನ್ನು ಕೆಎಎ ನಿರಾಕರಿಸಿದೆ’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋಚ್‌ಗಳ ಎಚ್ಚರಿಕೆ!
ಕಂಠೀರವ ಕ್ರೀಡಾಂಗಣವನ್ನು ಅಥ್ಲೆಟಿಕ್ಸ್‌ ಹೊರತುಪಡಿಸಿ ಉಳಿದ್ಯಾವ ಕ್ರೀಡೆಗೆ ನೀಡಬಾರದು ಎಂದು ನ್ಯಾಯಾಲಯ ಇತ್ತೀಚೆಗಷ್ಟೇ ಆದೇಶಿಸಿತ್ತು. ಇದು ಅಥ್ಲೀಟ್ಸ್‌ ಹಾಗೂ ಕೋಚ್‌ಗಳಿಗೆ ಬಲ ತುಂಬಿದೆ. ಒಂದೊಮ್ಮೆ ಕ್ರೀಡಾ ಇಲಾಖೆ, ಬಿಎಫ್‌ಸಿ ತಂಡಕ್ಕೆ ಕಂಠೀರವದಲ್ಲಿ ಫುಟ್ಬಾಲ್‌ ಆಡಲು ಅನುಮತಿ ನೀಡಿದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವುದಾಗಿ ಅಥ್ಲೆಟಿಕ್ಸ್ ಕೋಚ್‌ಗಳು ಎಚ್ಚರಿಸಿದ್ದಾರೆ.

‘ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ ಜತೆಯಲ್ಲಿ ಫುಟ್ಬಾಲ್‌ಗೆ ಅವಕಾಶ ನೀಡಿ ಎಂದು ಸ್ಥಳೀಯ ರಾಜಕೀಯ ನಾಯಕರೊಂದಿಗೆ ಜೆಎಸ್‌ಡಬ್ಲ್ಯು ಸಂಸ್ಥೆ ಅಧಿಕಾರಿ ಕೆಎಎ ಕಚೇರಿಗೆ ಭೇಟಿ ನೀಡಿ ಕೇಳಿಕೊಂಡಿದ್ದು ನಿಜ. ಆದರೆ ಯಾವುದೇ ಕಾರಣಕ್ಕೂ ಫುಟ್ಬಾಲ್‌ ನಡೆಸಲು ನಾವು ಬಿಡೋದಿಲ್ಲ.
- ಎಲ್ವಿಸ್‌ ಜೋಸೆಫ್‌, ಕೆಎಎ ಸಿಇಒ

ಒಂದೊಮ್ಮೆ ಜೆಎಸ್‌ಡಬ್ಲ್ಯು ಸಂಸ್ಥೆ ನೀಡಿರುವ ಪ್ರಸ್ತಾಪಕ್ಕೆ ಒಪ್ಪಿ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ಪಂದ್ಯಗಳನ್ನು ನಡೆಸಲು ಅವಕಾಶ ನೀಡಿದರೆ, ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದು ಖಚಿತ.
- ರಮೇಶ್‌, ಅಥ್ಲೆಟಿಕ್ಸ್‌ ಕೋಚ್‌

ಫುಟ್ಬಾಲ್‌ ಕೂಡ ಕ್ರೀಡೆ, ಅಥ್ಲೆಟಿಕ್ಸ್‌ ಕೂಡ ಕ್ರೀಡೆಯೇ ಎರಡನ್ನು ಕ್ರೀಡಾಂಗಣದಲ್ಲಿ ನಡೆಸಿಕೊಂಡು ಹೋಗಲು ಅವಕಾಶ ಇದ್ದರೆ ನಡೆಯಲಿ, ಇಲ್ಲವಾದಲ್ಲಿ ಬೇಡ. ರಾಜ್ಯ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆಯೋ ಅದರಂತೆ ಕಾರ‍್ಯನಿರ್ವಹಿಸುತ್ತೇವೆ.
- ರಮೇಶ್‌ ಎಂ.ಎಸ್‌. ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ

ವರದಿ: ಧನಂಜಯ ಎಸ್‌.ಹಕಾರಿ