ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ಪತ್ರಕರ್ತ ರಜತ್ ಶರ್ಮಾ ಗುಂಪು ಭರ್ಜರಿ ಫಲಿತಾಂಶ ಪಡೆದಿದೆ. ಸೋಮವಾರ ಹೊರಬಿದ್ದ ಫಲಿತಾಂಶದಲ್ಲಿ ಶರ್ಮಾ ಗುಂಪು ಎಲ್ಲಾ 12 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಕ್ಲೀನ್ ಸ್ವೀಪ್ ಸಾಧಿಸಿದೆ. ಇದರೊಂದಿಗೆ ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾಗೆ ಭಾರೀ ಹಿನ್ನಡೆಯುಂಟಾಗಿದೆ. 

ರಜತ್ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ ಮದನ್ ಲಾಲ್ ರನ್ನು ಖನ್ನಾ ಬೆಂಬಲಿಸಿದ್ದರು. ಮದನ್‌ರನ್ನು, ರಜತ್ 517 ಮತಗಳಿಂದ ಸೋಲಿಸಿದ್ದಾರೆ.  ನ್ಯಾ.ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದ ಬಳಿಕ ನಡೆದ ಚುನಾವಣೆಯಲ್ಲಿ ಸುಮಾರು 3000 ಸದಸ್ಯರು ಮತ ಚಲಾಯಿಸಿದ್ದರು. 

ರಜತ್ ಪರ 1521, ಮದನ್ ಪರ 1004 ಮತಗಳು ಚಲಾವಣೆಗೊಂಡಿದ್ದವು. ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೇಂದ್ರ ಬಾತ್ರಾ ಹಾಗೂ ದೆಹಲಿ ಕ್ರಿಕೆಟ್‌ನ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ, ರಜತ್‌ರನ್ನು ಬೆಂಬಲಿಸಿದ್ದರು.

ಗಂಭೀರ್‌ಗೆ ಸಮಸ್ತ ಹೊಣೆ:

ದೆಹಲಿಯ ನೆಚ್ಚಿನ ಕ್ರಿಕೆಟಿಗ ಗೌತಮ್ ಗಂಭೀರ್‌ಗೆ, ಸಂಸ್ಥೆಯ ಕ್ರಿಕೆಟ್ ವ್ಯವಹಾರಗಳನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗುತ್ತಿದೆ. ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರಾಗಿ ಗಂಭೀರ್ ಕಾರ್ಯ ನಿರ್ವಹಿಸಲಿದ್ದಾರೆ.