Asianet Suvarna News Asianet Suvarna News

ಭಾರತದ ಸ್ಟಾರ್ ಅಥ್ಲೀಟ್ಸ್ ಜಿನ್ಸನ್ ಜಾನ್ಸನ್‌, ಗೋಪಿಗೆ ಒಲಿಂಪಿಕ್ಸ್‌ಗೇರುವ ಗುರಿ

ಭಾರತದ ತಾರಾ ಅಥ್ಲೀಟ್‌ಗಳಾದ ತೋಣಕಲ್‌ ಗೋಪಿ ಹಾಗೂ ಜಿನ್ಸನ್‌ ಜಾನ್ಸನ್‌ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಸಜ್ಜಾಗಿದ್ದಾರೆ. ಇದರ ಜತೆಗೆ ಒಲಿಂಪಿಕ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹತೆಗಿಟ್ಟಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಸಹೋದರ ಸಂಸ್ಥೆಯಾದ ’ಕನ್ನಡಪ್ರಭ’ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Jinson Johnson Thonakal Gopi sets his sights on Olympic qualification
Author
Bengaluru, First Published Aug 23, 2019, 3:52 PM IST

ಬೆಂಗಳೂರು[ಆ.23]: 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನು 11 ತಿಂಗಳು ಮಾತ್ರ ಬಾಕಿ ಇದೆ. ಅಥ್ಲೆಟಿಕ್ಸ್‌ನಲ್ಲಿ ಭಾರತ ಪದಕ ಗೆಲ್ಲುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 

ಕಳೆದ ಕೆಲ ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ತೋರುತ್ತಾ, ದೇಶದ ಅಗ್ರ ಅಥ್ಲೀಟ್‌ಗಳಾಗಿ ರೂಪುಗೊಂಡಿರುವ ತೋಣಕಲ್‌ ಗೋಪಿ ಹಾಗೂ ಜಿನ್ಸನ್‌ ಜಾನ್ಸನ್‌ ಮುಂದಿನ ತಿಂಗಳು ಕತಾರ್‌ನ ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದ್ದಾರೆ. ದೇಶದ ಇಬ್ಬರು ತಾರಾ ಅಥ್ಲೀಟ್‌ಗಳು ಗುರುವಾರ ಬೆಂಗಳೂರಲ್ಲಿ ಸುವರ್ಣ ನ್ಯೂಸ್.ಕಾಂ ಸಹೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ತಮ್ಮ ಸಿದ್ಧತೆ, ನಿರೀಕ್ಷೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಕುಸ್ತಿ ಪಟು ವಿನೇಶ್ ಪೋಗತ್ ಬದುಕು ಬದಲಿಸಿತ್ತು ಸುಷ್ಮಾ ಸ್ವರಾಜ್ ಟ್ವೀಟ್!

ಒಲಿಂಪಿಕ್ಸ್‌ ಮ್ಯಾರಥಾನ್‌ ಓಡುವ ಕನಸು

ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಟಿ.ಗೋಪಿ, ಇದೀಗ ಒಲಿಂಪಿಕ್ಸ್‌ನ ಮ್ಯಾರಥಾನ್‌ನಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದಾರೆ. ವಯನಾಡಿನ ಕೃಷಿಕರ ಕುಟುಂಬದವರಾದ ಗೋಪಿ, ಭಾರತದ ನಂ.1 ಮ್ಯಾರಥಾನ್‌ ಓಟಗಾರ ಎನಿಸಿಕೊಂಡಿದ್ದಾರೆ.

ಒಲಿಂಪಿಕ್ಸ್‌ಗೇರಲು ಇದೆ 3 ಅವಕಾಶ

ಗೋಪಿಗೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 3 ಅವಕಾಶಗಳಿವೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಿದ್ದರೆ 42.195 ಕಿ.ಮೀ ದೂರವನ್ನು 2 ಗಂಟೆ 11 ನಿಮಿಷ 30 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಬೇಕು. ಗೋಪಿಯ ವೈಯಕ್ತಿಕ ಶ್ರೇಷ್ಠ ಸಮಯ 2 ಗಂಟೆ 13 ನಿಮಿಷ 39 ಸೆಕೆಂಡ್‌ಗಳಾಗಿದೆ. ವಿಶ್ವ ಚಾಂಪಿಯನ್‌ ಸೇರಿದಂತೆ ಟೋಕಿಯೋ ಮ್ಯಾರಥಾನ್‌ ಹಾಗೂ ಮುಂಬೈ ಮ್ಯಾರಥಾನ್‌ಗಳಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವಕಾಶವಿರಲಿದೆ.

‘ಒಲಿಂಪಿಕ್ಸ್‌ಗೇರಲು ಮೂರು ಪ್ರಮುಖ ಸ್ಪರ್ಧೆಗಳಿವೆ. ಅಲ್ಲಿ ಕಟ್‌ ಆಫ್‌ ಸಮಯದಲ್ಲಿ ಗುರಿ ತಲುಪುವ ವಿಶ್ವಾಸವಿದೆ. ಸಾಧ್ಯವಾದಷ್ಟುದೋಹಾದಲ್ಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದೇನೆ. ಬೆಂಗಳೂರಲ್ಲಿ ಉನ್ನತ ಮಟ್ಟದ ತರಬೇತಿಯಲ್ಲಿ ಭಾಗಿಯಾಗಿದ್ದೇನೆ’ ಎಂದು ಗೋಪಿ ಹೇಳಿದರು.

ಬೈಕ್ ರೈಡರ್‌ಗಳಿಗೆ ಬಂದಿದೆ ರೆಕಿ ಆ್ಯಪ್; ವಿಶ್ವದಲ್ಲೇ ಮೊದಲು!

ವಿಶ್ವ ಚಾಂಪಿಯನ್‌ಶಿಪ್‌ನತ್ತ ಗಮನ

ಏಷ್ಯನ್‌ ಗೇಮ್ಸ್‌, ಏಷ್ಯನ್‌ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದ ಜಿನ್ಸನ್‌ ಜಾನ್ಸನ್‌, ಒಲಿಂಪಿಕ್ಸ್‌ನಲ್ಲಿ 1500 ಮೀ. ಓಟದಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿದ್ದಾರೆ. ಕಳೆದೊಂದು ವರ್ಷದಿಂದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಜಾನ್ಸನ್‌, ಒಂದೊಂದೇ ಹೆಜ್ಜೆಯಿಡಲು ಇಚ್ಛಿಸುತ್ತಿರುವುದಾಗಿ ಹೇಳಿದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಕನಸಿಗೆಯಾದರೂ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವುದು ಮೊದಲ ಗುರಿ ಎಂದರು.

ತರಬೇತಿಗಾಗಿ ಅಮೆರಿಕಕ್ಕೆ ಪ್ರಯಾಣ

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ನಲ್ಲಿ ಅಭ್ಯಾಸ ನಡೆಸುತ್ತಿರುವ ಜಿನ್ಸನ್‌ ಜಾನ್ಸನ್‌, ವಿಶ್ವ ಚಾಂಪಿಯನ್‌ಗೂ ಮುನ್ನ ಅಮೆರಿಕಕ್ಕೆ ತೆರಳಿ, ಹೆಸರಾಂತ ಕೋಚ್‌ ಸ್ಕಾಟ್‌ ಸೈಮನ್ಸ್‌ರಿಂದ ತರಬೇತಿ ಪಡೆಯುವುದಾಗಿ ಹೇಳಿದರು. 800 ಮೀ. ಓಟದಲ್ಲೂ ಜಿನ್ಸನ್‌ ದೇಶದ ಅಗ್ರ ಅಥ್ಲೀಟ್‌ ಆಗಿದ್ದಾರೆ. ಆದರೆ ಒಲಿಂಪಿಕ್ಸ್‌ನಲ್ಲಿ 1500 ಮೀ. ಓಟಕ್ಕೆ ಅರ್ಹತೆ ಪಡೆಯುವುದು ತಮ್ಮ ಮೊದಲ ಗುರಿ ಎಂದು ಅವರು ತಿಳಿಸಿದರು.

‘2016ರ ರಿಯೋ ಒಲಿಂಪಿಕ್ಸ್‌ಗೆ ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಗೆದ್ದು ಅರ್ಹತೆ ಪಡೆದಿದ್ದೆ. ಆ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. 2020ರ ಒಲಿಂಪಿಕ್ಸ್‌ಗೆ ಬೆಂಗಳೂರಲ್ಲೇ ತಯಾರಿ ನಡೆಸುತ್ತಿರುವುದು ಸ್ಫೂರ್ತಿ ತುಂಬಿದೆ’ ಎಂದು ಜಾನ್ಸನ್‌ ಹೇಳಿದರು.
 

Follow Us:
Download App:
  • android
  • ios