ದುಬೈ[ಮಾ.05]: ಭಾರತ ತಂಡದ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ ಐಸಿಸಿ ಮಹಿಳಾ ಏಕದಿನ ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. 

ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಒಟ್ಟು 8 ವಿಕೆಟ್‌ ಕಿತ್ತ ಜೂಲನ್‌, 2017ರ ಫೆಬ್ರವರಿ ಬಳಿಕ ಮೊದಲ ಬಾರಿಗೆ ನಂ.1 ಪಟ್ಟಅಲಂಕರಿಸಿದ್ದಾರೆ. 218 ವಿಕೆಟ್‌ಗಳೊಂದಿಗೆ ಏಕದಿನದಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ ಎನ್ನುವ ದಾಖಲೆ ಹೊಂದಿರುವ ಜೂಲನ್‌, ಅಗ್ರಸ್ಥಾನದಲ್ಲಿ 1873 ದಿನಗಳನ್ನು ಕಳೆದಿದ್ದರು. ಆಸ್ಪ್ರೇಲಿಯಾದ ಮಾಜಿ ಬೌಲರ್‌ ಕ್ಯಾಥರೀನ್‌ ಫಿಟ್’ಜಪ್ಯಾಟ್ರಿಕ್‌ 2113 ದಿನಗಳ ಕಾಲ ನಂ.1 ಸ್ಥಾನದಲ್ಲಿದ್ದರು.

ಭಾರತದ ಶಿಖಾ ಪಾಂಡೆ 12 ಸ್ಥಾನಗಳ ಏರಿಕೆ ಕಂಡು, 5ನೇ ಸ್ಥಾನ ಪಡೆದಿದ್ದಾರೆ. 9 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ಇಬ್ಬರು ಬೌಲರ್‌ಗಳು ಅಗ್ರ 5ರಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ಪಟ್ಟಿಯಲ್ಲಿ ಸ್ಮೃತಿ ಮಂಧನಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. 2012ರ ಬಳಿಕ ಮೊದಲ ಬಾರಿಗೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಭಾರತೀಯರು ಅಗ್ರಸ್ಥಾನ ಪಡೆದಿದ್ದಾರೆ.