ಜ್ಯಾಕ್ಸನ್ ಸಿಂಗ್ ಅಚಾನಕ್ಕಾಗಿ ಗಳಿಸಿದ ಗೋಲು ಇದಾಗಿರಲಿಲ್ಲ. ಗಟ್ಟಿಮುಟ್ಟಾದ ಹಾಗೂ ಎತ್ತರದ ಜ್ಯಾಕ್ಸನ್ ಸಿಂಗ್ ಅವರು ಕೊಲಂಬಿಯಾದ ಸದೃಢ ಆಟಗಾರರಿಗೆ ಸಾಟಿಯಾಗುತ್ತಾರೆಂದೇ ಈ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ, ಮಿಡ್'ಫೀಲ್ಡರ್ ಆಗಿರುವ ಜ್ಯಾಕ್ಸನ್ ಸಿಂಗ್ ಈ ಪಂದ್ಯಾದ್ಯಂತ ಎದುರಾಳಿಗಳ ಬೆವರು ಇಳಿಸಿದರು.
ನವದೆಹಲಿ(ಅ. 10): ಫುಟ್ಬಾಲ್ ಕ್ರೀಡೆ ವಿಚಾರದಲ್ಲಿ ಇಷ್ಟು ದಿನ ಭಾರತ ಮಲಗಿರುವ ದೈತ್ಯ ಅಥವಾ ಸ್ಲೀಪಿಂಗ್ ಜೈಂಟ್ ಆಗಿತ್ತು. ಅಂಡರ್-17 ವಿಶ್ವಕಪ್ ಮೂಲಕ ಭಾರತ ಮೇಲೇಳುತ್ತಿರುವ ರಾಷ್ಟ್ರವಾಗಿದೆ. ಲೀಗ್ ಹಂತದಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಒಂದು ಗಳಿಸಿದ ಬಳಿಕವಂತೂ ಭಾರತ ಮೇಲೇಳುತ್ತಿರುವ ಕುರುಹು ಸ್ಪಷ್ಟವಾಗಿದೆ. ಜ್ಯಾಕ್ಸನ್ ಸಿಂಗ್ ಇತಿಹಾಸದ ಪುಟದಲ್ಲಿ ಹೆಸರು ದಾಖಲಿಸಿದ್ದಾರೆ. ಫೀಫಾ ವಿಶ್ವಕಪ್ ಟೂರ್ನಿಯೊಂದರಲ್ಲಿ ಮೊತ್ತಮೊದಲ ಗೋಲು ಗಳಿಸಿದ ದಾಖಲೆ ಮಣಿಪುರದ ಹುಡುಗ ಜ್ಯಾಕ್ಸನ್ ಸಿಂಗ್ ಅವರದ್ದಾಗಿದೆ. 82ನೇ ನಿಮಿಷದಲ್ಲಿ ಜ್ಯಾಕ್ಸನ್ ಸಿಂಗ್ ಅವರು ಪವರ್'ಫುಲ್ ಹೆಡರ್ ಮೂಲಕ ಗೋಲು ಗಳಿಸಿದಾಗ ಭಾರತೀಯ ಫುಟ್ಬಾಲ್ ಪ್ರೇಮಿಗಳಿಗೆ ಸ್ವರ್ಗವೇ ಕೈಗೆಟುಕಿದಂತಾಗಿತ್ತು. ಅಲ್ಲಿಯವರೆಗೆ ಒಂದು ಗೋಲು ಹಿನ್ನಡೆಯಲ್ಲಿದ್ದ ಭಾರತ ಸಮಬಲ ಸಾಧಿಸಿತ್ತು. ಗೋಲಿನ ಅಂತರ ಹೆಚ್ಚಾಗಬಾರದೆಂಬ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಜ್ಯಾಕ್ಸನ್ ಸಿಂಗ್ ಗೋಲು ಬೆರಗು ಮೂಡಿಸಿತ್ತು. ಭಾರತದ ಕೋಚ್ ಲೂಯಿಸ್ ನಾರ್ಟನ್ ಡೀ ಮ್ಯಾಟೋಸ್ ಅವರಂತೂ ಪಂದ್ಯ ಗೆದ್ದೇ ಬಿಟ್ಟೆವೆನ್ನುಷ್ಟು ಖುಷಿಯಲ್ಲಿ ಉನ್ಮಾದದ ಸ್ಥಿತಿಯಲ್ಲಿದ್ದರು. ಆದರೆ, ವಿಧಿಯ ಕ್ರೌರ್ಯ ಹೇಗಿರುತ್ತೆ ನೋಡಿ... ಮರುನಿಮಿಷದಲ್ಲೇ ಕೊಲಂಬಿಯಾದ ಪೆನಾಲೋವಾ ಗೋಲು ಗಳಿಸಿ ಕೊಲಂಬಿಯಾಗೆ ಮುನ್ನಡೆ ತಂದುಕೊಟ್ಟರು. ಜ್ಯಾಕ್ಸನ್ ಗೋಲು ಗಳಿಸಿದ ಸಂಭ್ರಮದ ಕಿಚ್ಚು ಇನ್ನೂ ಆರೇ ಇಲ್ಲ... ಈಗ ಎದುರಾಳಿಗಳ ಗೋಲಿನಿಂದ ಭಾರತೀಯರಿಗೆ ಶಾಕ್ ಆಗಿತ್ತು. ಫುಟ್ಬಾಲ್ ಸ್ಟೇಡಿಯಂನಲ್ಲಿ ನೆರೆದಿದ್ದವರು ಸ್ತಂಬೀಭೂತರಾದರು. ಖುಷಿಯ ಅಲೆಯು ಮೌನದಲ್ಲಿ ಬಂಧಿಯಾಯಿತು. ಭಾರತೀಯ ಬಾಯ್ಸ್ ಉತ್ಸಾಹ ಝರ್ರನೆ ಜಾರಿತು. ಇನ್ನುಳಿದ 20 ನಿಮಿಷಗಳು ಹುಡುಗರು ಅಕ್ಷರಶಃ ಸಪ್ಪೆಯಾದರು. ಕೆಚ್ಚು ಕಳೆದುಕೊಂಡಿದ್ದರು. ಇನ್ನೊಂದು ಗೋಲು ಗಳಿಸುವುದಿರಲಿ, ಎದುರಾಳಿಗಳೆಲ್ಲಿ ಗೋಲುಗಳ ಸುರಿಮಳೆ ಮಾಡಿಬಿಡುತ್ತಾರೆಂಬ ಭಯವಂತೂ ಇತ್ತು.
ಭಾರತವೇನಾದರೂ ಈ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರೆ ಜ್ಯಾಕ್ಸನ್ ಗೋಲು ಇನ್ನಷ್ಟು ಸ್ಮರಣೀಯವಾಗಿರುತ್ತಿತ್ತು. ಆದರೂ ಕೂಡ ಜ್ಯಾಕ್ಸನ್ ಗೋಲು ಇತಿಹಾಸದ ಪುಟಕ್ಕೆ ಸೇರಿರುವುದಂತೂ ಹೌದು. ಜ್ಯಾಕ್ಸನ್ ಸಿಂಗ್ ಅಚಾನಕ್ಕಾಗಿ ಗಳಿಸಿದ ಗೋಲು ಇದಾಗಿರಲಿಲ್ಲ. ಗಟ್ಟಿಮುಟ್ಟಾದ ಹಾಗೂ ಎತ್ತರದ ಜ್ಯಾಕ್ಸನ್ ಸಿಂಗ್ ಅವರು ಕೊಲಂಬಿಯಾದ ಸದೃಢ ಆಟಗಾರರಿಗೆ ಸಾಟಿಯಾಗುತ್ತಾರೆಂದೇ ಈ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ, ಮಿಡ್'ಫೀಲ್ಡರ್ ಆಗಿರುವ ಜ್ಯಾಕ್ಸನ್ ಸಿಂಗ್ ಈ ಪಂದ್ಯಾದ್ಯಂತ ಎದುರಾಳಿಗಳ ಬೆವರು ಇಳಿಸಿದರು. ಕೊಲಂಬಿಯನ್ನರಿಂದ ಬಾಲ್ ಕಸಿದುಕೊಳ್ಳುವುದರಿಂದ ಹಿಡಿದು, ಜಾಣತನದಿಂದ ಪಾಸ್ ಮಾಡುವುದು ಇತ್ಯಾದಿಗಳಿಂದ ಜ್ಯಾಕ್ಸನ್ ಗಮನ ಸೆಳೆದರು. ಈ ಪಂದ್ಯದಲ್ಲಿ ಭಾರತ ಮೂರ್ನಾಲ್ಕು ಬಾರಿ ಗೋಲು ಗಳಿಸುವ ಸನಿಹಕ್ಕೆ ಬಂದಿತ್ತು. ಬಹುತೇಕ ಆ ಎಲ್ಲಾ ಸಂದರ್ಭಗಳಲ್ಲಿ ಜ್ಯಾಕ್ಸನ್ ಸಿಂಗ್ ಪಾತ್ರವಿತ್ತು.
ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತೀಯರು ತುಸು ದುರ್ಬಲರಾಗಿ ತೋರಿದರು. ಆ ಪಂದ್ಯದ ಕೊನೆಯ ಕೆಲ ನಿಮಿಷಗಳು ಭಾರತದ ಹುಡುಗರು ಹುಲಿಗಳಂತೆ ಕಂಡುಬಂದಿದ್ದರು. ಎರಡನೇ ಪಂದ್ಯದಲ್ಲಿ ಕೊಲಂಬಿಯಾಗೆ ಸರಿಸಾಟಿಯಾಗಿ ಹೋರಾಡುವ ಪ್ರಯತ್ನ ನಡೆಯಿತು. ಕೊಲಂಬಿಯಾವೇ ಹೆಚ್ಚು ಪ್ರಾಬಲ್ಯ ತೋರಿದರೂ ಹೆಚ್ಚು ಮೆರೆದಾಲು ಭಾರತ ಅವಕಾಶ ಕೊಡಲಿಲ್ಲವೆಂಬುದು ಗಮನಾರ್ಹ. ಭಾರತದ ಪ್ರಬಲ ರಕ್ಷಣಾ ವ್ಯೂಹ ಭೇದಿಸಲು ಕೊಲಂಬಿಯಾದ ಮುನ್ನಡೆ ಆಟಗಾರರಿಗೆ ಬಹಳ ಕಠಿಣವಾಗಿತ್ತು. ಅನ್ವರ್ ಅಲಿ, ಜ್ಯಾಕ್ಸನ್ ಸಿಂಗ್, ಸಂಜೀವ್ ಸ್ಟ್ಯಾಲಿನ್ ಉತ್ತಮ ಆಟವಾಡಿದರು. ಗೋಲ್'ಕೀಪರ್ ಧೀರಜ್ ಸಿಂಗ್ ಅವರಂತೂ ಕೊಲಂಬಿಯಾ ಪಾಲಿಗೆ ತಡೆಗೋಡೆಯಾಗಿ ಪರಿಣಮಿಸಿದರು.
ಈ ಟೂರ್ನಿಯಲ್ಲಿ ಭಾರತ ತನ್ನ ಕೊನೆಯ ಲೀಗ್ ಪಂದ್ಯವನ್ನು ಘಾನಾ ವಿರುದ್ಧ ಅ.12ರಂದು ಆಡಲಿದೆ. ಒಂದು ಪಂದ್ಯ ಗೆದ್ದು ಒಂದು ಪಂದ್ಯ ಸೋತಿರುವ ಘಾನಾ ತಂಡಕ್ಕೆ ಈ ಪಂದ್ಯ ಬಹಳ ಮಹತ್ವದ್ದಾಗಿದೆ. ಅಮೆರಿಕ ಈಗಾಗಲೇ ನಾಕೌಟ್ ಹಂತ ತಲುಪಿದೆ. ಈ ಗುಂಪಿನಲ್ಲಿ ಎರಡನೇ ತಂಡವಾಗಿ ಮುಂದಿನ ಹಂತ ಪ್ರವೇಶಿಸಲು ಘಾನಾ ಮತ್ತು ಕೊಲಂಬಿಯಾ ನಡುವೆ ಪೈಪೋಟಿ ಇದೆ. ಇನ್ನು, ಭಾರತಕ್ಕೆ ತನ್ನ ಕೊನೆಯ ಪಂದ್ಯದಲ್ಲಿ ಮಾನ ಉಳಿಸಿಕೊಳ್ಳುವ ಹೋರಾಟವಿದೆ. ಕೊಲಂಬಿಯಾ ವಿರುದ್ಧ ಗೋಲು ಗಳಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಹುಡುಗರ ಆತ್ಮವಿಶ್ವಾಸ ಹೆಚ್ಚಾಗಿದೆ. ಘಾನಾ ವಿರುದ್ಧ ತಮ್ಮ ತಂಡ ಗೆಲ್ಲುತ್ತದೆ ಎಂದು ಹೇಳುವಷ್ಟು ಆತ್ಮವಿಶ್ವಾಸದಲ್ಲಿ ಭಾರತದ ಹುಡುಗರಿದ್ದಾರೆ.
