Breaking ಕಾಮನ್‌ವೆಲ್ತ್ ಗೇಮ್ಸ್‌ಗೂ ಮುನ್ನ ಭಾರತಕ್ಕೆ ಶಾಕ್, ನೀರಜ್ ಚೋಪ್ರಾಗೆ ಗಾಯ..!
ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಬಿದ್ದ ನೀರಜ್ ಚೋಪ್ರಾ
ಇತ್ತೀಚೆಗಷ್ಟೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ನೀರಜ್
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಜುಲೈ 28ರಿಂದ ಆರಂಭ
ನವದೆಹಲಿ(ಜು.26): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ನೀರಜ್ ಚೋಪ್ರಾ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ವೇಳೆಯಲ್ಲಿ ಗಾಯಗೊಂಡಿದ್ದರಿಂದಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ.
ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ 100% ಫಿಟ್ನೆಸ್ ಇಲ್ಲದೇ ಇರುವುದರಿಂದಾಗಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ. ಕಳೆದ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಸಂದರ್ಭದಲ್ಲಿಯೇ ನೀರಜ್ ಚೋಪ್ರಾ ತೊಡೆ ಸಂದಿನ ನೋವನ್ನು ಎದುರಿಸುತ್ತಿದ್ದರು. ಇದರ ಹೊರತಾಗಿಯೂ ಜಾವೆಲಿನ್ ಥ್ರೋನ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್ ದೂರ ಎಸೆಯುವ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಎನಿಸಿಕೊಂಡಿದ್ದಾರೆ. 2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದರು. ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಪದಕ ಗೆದ್ದು ಕೆಲವೇ ದಿನಗಳಲ್ಲಿ ಈ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
Neeraj Chopra ಗೆಲುವು ಭಾರತೀಯ ಕ್ರೀಡೆಯ ವಿಶೇಷ ಕ್ಷಣ: ಪ್ರಧಾನಿ ಮೋದಿ
ಅಮೆರಿಕದ ಯುಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಬಳಿಕ ಮಾತನಾಡಿದ್ದ ನೀರಜ್ ಚೋಪ್ರಾ, ತಾವು ಅನುಭವಿಸಿದ್ದ ನೋವಿನ ಬಗ್ಗೆ ತುಟಿ ಬಿಚ್ಚಿದ್ದರು. ಫೈನಲ್ ಪಂದ್ಯದುದ್ದಕ್ಕೂ ನಾನು ನನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ನಾಲ್ಕನೇ ಪ್ರಯತ್ನದ ವೇಳೆ ನನಗೆ ತೊಡೆ ಸಂದುವಿನಲ್ಲಿ ನೋವಿನ ಅರಿವಾಯಿತು. ಹೀಗಾಗಿ ನಾನು ಕೊನೆಯ ಎರಡು ಪ್ರಯತ್ನಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಆದರೆ ನಾನು ನನ್ನ ಪ್ರದರ್ಶನದ ಬಗ್ಗೆ ಖುಷಿ ಇದೆ ಎಂದು ನೀರಜ್ ಚೋಪ್ರಾ ಹೇಳಿದ್ದರು.