Asianet Suvarna News Asianet Suvarna News

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌; ಸೆಮೀಸ್‌ನಲ್ಲಿ ಸೋತ ಪ್ರಣೀತ್‌

ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬಿ.ಸಾಯಿ ಪ್ರಣೀತ್‌ ಮುಗ್ಗರಿಸಿದ್ದಾರೆ. ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಸೆಮಿಫೈನಲ್ ಪ್ರವೇಶಿಸಿದ್ದ ಪ್ರಣೀತ್, ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ. 

Japan Open Badminton Sai Praneeth bows out in semi final
Author
Bengaluru, First Published Jul 28, 2019, 10:27 AM IST

ಟೋಕಿಯೋ(ಜು.28): ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್‌, ಅಗ್ರ ಶ್ರೇಯಾಂಕಿತ ಆಟಗಾರ ಜಪಾನ್‌ನ ಕೆಂಟೋ ಮೊಮೊಟಾ ವಿರುದ್ಧ ಸೋಲುಂಡು ಹೊರಬಿದ್ದರು.

ಇದನ್ನೂ ಓದಿ: ಇಂಡೋನೇಷ್ಯಾ ಓಪನ್ 2019: ಸಿಂಧು ಪ್ರಶಸ್ತಿ ಕನಸು ಭಗ್ನ!

ಶನಿವಾರ ನಡೆದ ಉಪಾಂತ್ಯದ ಪಂದ್ಯದಲ್ಲಿ ಪ್ರಣೀತ್‌, 18-21, 12-21 ಗೇಮ್‌ಗಳಲ್ಲಿ ಪರಾಭವಗೊಂಡರು. ಕೇವಲ 45 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು. ಮೊದಲ ಗೇಮ್‌ನಲ್ಲಿ ಉತ್ತಮ ಪೈಪೋಟಿ ನೀಡಿದ್ದ ಪ್ರಣೀತ್‌, 6-11ರ ಹಿನ್ನಡೆ ಹೊಂದಿದ್ದರೂ ಪುಟಿದೆದ್ದು ಗೇಮ್‌ ಗೆಲ್ಲುವ ವಿಶ್ವಾಸ ಗಳಿಸಿದ್ದರು. ಆದರೆ ಮೊಮೊಟಾ ಆಕ್ರಮಣಕಾರಿ ಆಟವಾಡಿ ಗೇಮ್‌ ತಮ್ಮದಾಗಿಸಿಕೊಂಡರು. 2ನೇ ಗೇಮ್‌ನಲ್ಲಿ ಪ್ರಣೀತ್‌ 9-6ರ ಮುನ್ನಡೆ ಪಡೆದರೂ, ಬಿಡುವಿನ ವೇಳೆಗೆ ಮೊಮೊಟಾ 11-9ರಿಂದ ಮುನ್ನಡೆದರು. ಬಳಿಕ ಸತತವಾಗಿ ಅಂಕ ಕಲೆಹಾಕಿ, ಸುಲಭವಾಗಿ ಫೈನಲ್‌ ಪ್ರವೇಶಿಸಿದರು. ಭಾನುವಾರ ಪ್ರಶಸ್ತಿಗಾಗಿ ಮೊಮೊಟಾ, ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟಿವಿರುದ್ಧ ಸೆಣಸಲಿದ್ದಾರೆ.

ಟೂರ್ನಿಯಲ್ಲಿ ಒಂದೂ ಗೇಮ್‌ ಸೋಲದೆ ಸೆಮೀಸ್‌ಗೇರಿದ್ದ ಪ್ರಣೀತ್‌, ಈ ವರ್ಷ ಮೊದಲ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದರು. ಆದರೆ ವಿಶ್ವ ನಂ.1 ಆಟಗಾರನ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಕೆಲ ತಿಂಗಳುಗಳ ಹಿಂದೆ ಸಿಂಗಾಪುರ ಓಪನ್‌ ಟೂರ್ನಿಯಲ್ಲೂ ಪ್ರಣೀತ್‌, ಮೊಮೊಟಾ ವಿರುದ್ಧ ಸೋಲುಂಡಿದ್ದರು. ಈ ವರ್ಷ ಸ್ವಿಸ್‌ ಓಪನ್‌ ಫೈನಲ್‌ ಪ್ರವೇಶಿಸಿದ್ದನ್ನು ಹೊರತುಪಡಿಸಿ ಉಳಿದ್ಯಾವ ಟೂರ್ನಿಗಳಲ್ಲಿ ಪ್ರಣೀತ್‌ಗೆ ಪ್ರಶಸ್ತಿ ಸುತ್ತು ಪ್ರವೇಶಿಸಲು ಸಾಧ್ಯವಾಗಿಲ್ಲ.

Follow Us:
Download App:
  • android
  • ios