ಲಾರ್ಡ್ಸ್[ಆ.12]: ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್’ನ ಎರಡನೇ ಇನ್ನಿಂಗ್ಸ್’ನಲ್ಲಿ ಭಾರತ ಮತ್ತೊಮ್ಮೆ ಎಡವಿದೆ. ಮೊದಲ ಇನ್ನಿಂಗ್ಸ್’ನಲ್ಲಿ 5 ವಿಕೆಟ್ ಕಬಳಿಸಿ ಭಾರತಕ್ಕೆ ಮಾರಕವಾಗಿದ್ದ ಇಂಗ್ಲೆಂಡ್’ನ ಅನುಭವಿ ವೇಗಿ ಜೇಮ್ಸ್ ಆ್ಯಂಡರ್’ಸನ್ ಮತ್ತೊಮ್ಮೆ ಭಾರತಕ್ಕೆ ಆಘಾತ ನೀಡಿದ್ದಾರೆ.

ಮೂರನೇ ಓವರ್’ನ ಎರಡನೇ ಎಸೆತದಲ್ಲಿ ಮುರಳಿ ವಿಜಯ್ ಅವನ್ನು ಬಲಿಪಡೆಯುವಲ್ಲಿ ಆ್ಯಂಡರ್’ಸನ್ ಯಶಸ್ವಿಯಾಗಿದ್ದಾರೆ. ಈ ಒಂದು ವಿಕೆಟ್ ಆ್ಯಂಡರ್’ಸನ್ ಅವರ ಹೆಸರಿಗೆ 4 ದಾಖಲೆಗಳಿಗೆ ಸಾಕ್ಷಿಯಾಯಿತು.

ಲಾರ್ಡ್ಸ್ ಮೈದಾನದಲ್ಲಿ 100 ವಿಕೆಟ್: 

ಕ್ರಿಕೆಟ್ ಕಾಶಿ ಎಂದೇ ಕರೆಯಲಾಗುವ ಲಾರ್ಡ್ಸ್ ಮೈದಾನದಲ್ಲಿ ಜೇಮ್ಸ್ ಆ್ಯಂಡರ್’ಸನ್ 100 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಮೈದಾನವೊಂದರಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ಹೆಸರಿನಲ್ಲಿದೆ. ಕೊಲಂಬೋ ಮೈದಾನದಲ್ಲಿ ಮುತ್ತಯ್ಯ 166 ವಿಕೆಟ್ ಕಬಳಿಸಿ ಅಗ್ರಸ್ಥಾನದಲ್ಲಿದ್ದಾರೆ.

550 ವಿಕೆಟ್: 

ಜೇಮ್ಸ್ ಆ್ಯಂಡರ್’ಸನ್ ಟೆಸ್ಟ್ ಕ್ರಿಕೆಟ್’ನಲ್ಲಿ 550 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇನ್ನು 13 ವಿಕೆಟ್ ಕಬಳಿಸಿದರೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೇನ್ ಮೆಗ್ರಾತ್ ದಾಖಲೆಯನ್ನು ಅಳಿಸಿಹಾಕಲಿದ್ದಾರೆ. ಬಹುಶಃ ಇದೇ ಸರಣಿಯಲ್ಲಿ ಈ ದಾಖಲೆ ನಿರ್ಮಾಣವಾಗಬಹುದು.

ವಿಜಯ್ 7 ಬಾರಿ ಬಲಿ:

ಭಾರತದ ಆರಂಭಿಕ ಬ್ಯಾಟ್ಸ್’ಮನ್ ಮುರಳಿ ವಿಜಯ್ ಏಳನೇ ಬಾರಿಗೆ ಆ್ಯಂಡರ್’ಸನ್’ಗೆ ವಿಕೆಟ್ ಒಪ್ಪಿಸಿದ್ದಾರೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್’ಗೆ 6 ಬಾರಿ ವಿಕೆಟ್ ಒಪ್ಪಿಸಿದ್ದರು.

150ನೇ ಆರಂಭಿಕ ವಿಕೆಟ್:

ವಿಜಯ್ ವಿಕೆಟ್ ಪಡೆಯುವುದರೊಂದಿಗೆ 150 ಬಾರಿ ಎದುರಾಳಿ ತಂಡದ ಆರಂಭಿಕ ಬ್ಯಾಟ್ಸ್’ಮನ್’ನನ್ನು ಬಲಿಪಡೆದ ಸಾಧನೆಯನ್ನು ಆ್ಯಂಡರ್’ಸನ್ ಮಾಡಿದ್ದಾರೆ. ಗ್ಲೇನ್ ಮೆಗ್ರಾತ್ 155 ಬಾರಿ ಆರಂಭಿಕರನ್ನು ಬಲಿ ಪಡೆದ ಸಾಧನೆ ಮಾಡಿದ್ದಾರೆ.