ಮೊದಲೆರಡು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಪುಣೆಗೆ ಸೋಲಿನ ರುಚಿ ತೋರಿಸುವಲ್ಲಿ ಪ್ಯಾಂಥರ್ಸ್ ಪಡೆ ಯಶಸ್ವಿಯಾಯಿತು.

ನಾಗ್ಪುರ(ಆ.10): ಮಂಜಿತ್ ಜಿಲ್ಲಾರ್ ಅವರ ಪ್ರಭಾವಿ ಪ್ರದರ್ಶನದ ನೆರವಿನಿಂದ ಬಲಾಢ್ಯ ಪುಣೇರಿ ಪಲ್ಟಾನ್ ತಂಡವನ್ನು ಬಗ್ಗುಬಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು. ಮೊದಲೆರಡು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಪುಣೆಗೆ ಸೋಲಿನ ರುಚಿ ತೋರಿಸುವಲ್ಲಿ ಪ್ಯಾಂಥರ್ಸ್ ಪಡೆ ಯಶಸ್ವಿಯಾಯಿತು.

ಇಲ್ಲಿನ ಮಂಕಾಪುರ್ ಒಳಾಂಗಣ ಕ್ರೀಡಾಗಣದಲ್ಲಿ ನಡೆದ ‘ಎ’ ವಲಯದ ಪಂದ್ಯದಲ್ಲಿ ಪುಣೆ ವಿರುದ್ಧ ಜೈಪುರ 30-28 ಅಂಕಗಳ ರೋಚಕ ಗೆಲುವು ಸಾಧಿಸಿತು. ಪುಣೇರಿ ಪಲ್ಟಾನ್ ಪರ ಸಂದೀಪ್ ನರ್ವಾಲ್ 8 ಅಂಕ ಗಳಿಸಿ ಮಿಂಚಿದರೆ, ಮಂಜಿತ್ ಚಿಲ್ಲಾರ್ 9 ಅಂಕ ಗಳಿಸಿ ಜೈಪುರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲಾರ್ಧದಲ್ಲಿ ತುಷಾರ್ ಪಾಟೀಲ್ ಮೊದಲ ರೈಡ್‌'ನಲ್ಲಿ 1 ಅಂಕ ತಂದುಕೊಡುವ ಮೂಲಕ ಜೈಪುರ ಖಾತೆ ತೆರೆಯಿತು. ಪುಣೆಗೆ ನಾಯಕ ದೀಪಕ್ ಹೂಡಾ ಮೊದಲ ಅಂಕ ತಂದುಕೊಟ್ಟರು. ಆರಂಭದಲ್ಲಿ ಎರಡೂ ತಂಡಗಳು ರಕ್ಷಣಾತ್ಮಕ ಆಟಕ್ಕೆ ಮುಂದಾದವು. 9ನೇ ನಿಮಿಷದಲ್ಲಿ ಉಭಯ ತಂಡಗಳು 6-6ರಲ್ಲಿ ಸಮಬಲ ಸಾಧಿಸಿದ್ದವು. ಮೊದಲಾರ್ಧದ ಮುಕ್ತಾಯದ ವೇಳೆಗೆ 14-11ರಲ್ಲಿ ಪ್ಯಾಂಥರ್ಸ್‌ ಮುನ್ನಡೆ ಪಡೆದುಕೊಂಡಿತು.

ದ್ವಿತೀಯಾರ್ಧದ ಆರಂಭದಲ್ಲೆ ಪುಣೆ ತಂಡ ಆಲೌಟ್ ಆಗುವ ಮೂಲಕ ಜೈಪುರಕ್ಕೆ 3 ಅಂಕಗಳನ್ನು ಬಿಟ್ಟುಕೊಟ್ಟಿತು. ಕೊನೆ ಕ್ಷಣದ ವರೆಗೂ ಪುಣೆ ಪುಟಿದೇಳುವ ಪ್ರಯತ್ನ ನಡೆಸಿತು. ಆದರೆ ಮಂಜಿತ್ ಹಾಗೂ ಜಸ್ವೀರ್ ತಮ್ಮ ಅನುಭವದ ಪ್ರದರ್ಶನ ತೋರುವ ಮೂಲಕ ತಂಡ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು. ಕೊನೆ ಕ್ಷಣದ ವರೆಗೂ ಪಂದ್ಯ ರೋಚಕತೆ ಹಿಡಿದಿಟ್ಟುಕೊಂಡಿತ್ತು. ಅಂತಿಮವಾಗಿ 2 ಅಂಕಗಳ ಅಂತರದಲ್ಲಿ ಪ್ಯಾಂಥರ್ಸ್‌ ಜಯದ ನಗೆ ಬೀರಿತು.