ದುಬೈ(ಡಿ.21): ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಅಂತಾರಾಷ್ಟ್ರೀಯ ಟೆಸ್ಟ್ ಶ್ರೇಯಾಂಕದಲ್ಲಿ ಭಾರತದ ಇಬ್ಬರು ಸ್ಪಿನ್ ಬೌಲರ್‌ಗಳು ಮೊದಲೆರಡು ಸ್ಥಾನಗಳನ್ನು ಆಕ್ರಮಿಸಿ ಹೊಸ ದಾಖಲೆ ಬರೆದಿದ್ದಾರೆ.

ಮಂಗಳವಾರವಷ್ಟೇ ಚೆನ್ನೈನಲ್ಲಿ ಮುಗಿದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 75 ರನ್ ಗೆಲುವು ಸಾಧಿಸಿದ ಭಾರತ ತಂಡದ ಐತಿಹಾಸಿಕ ಸಾಧನೆಯ ನಂತರದಲ್ಲಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಭಾರತದ ಸ್ಪಿನ್‌'ದ್ವಯರಾದ ಅಶ್ವಿನ್-ಜಡೇಜಾ ಈ ಚಾರಿತ್ರಿಕ ಸಾಧನೆ ಮೆರೆದಿದ್ದಾರೆ.

ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಹಾಗೂ ಒಟ್ಟಾರೆ ಈ ಪಂದ್ಯದಲ್ಲಿ 154 ರನ್‌'ಗಳಿಗೆ 10 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜಡೇಜಾ ಆಶ್ವಿನ್'ಗಿಂತ ಕೇವಲ 8 ಪಾಯಿಂಟ್ಸ್ ಹಿಂದಿದ್ದಾರೆ. ಅಂದಹಾಗೆ ಅಶ್ವಿನ್ ಈಗಾಗಲೇ ವಿಶ್ವದ ನಂ.1 ಬೌಲರ್ ಪಟ್ಟ ಗಳಿಸಿದ್ದಾರೆ.

42 ವರ್ಷಗಳ ನಂತರ ಈ ಸಾಧನೆ

1974ರಲ್ಲಿ ಕರ್ನಾಟಕದ ಲೆಗ್ ಸ್ಪಿನ್ನರ್ ಭಗವತ್ ಚಂದ್ರಶೇಖರ್ ಹಾಗೂ ಪಂಜಾಬ್‌ನ ಎಡಗೈ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಂತರ ವಿಶ್ವ ಬೌಲಿಂಗ್ ಪಟ್ಟಿಯ ಮೊದಲೆರಡು ಸ್ಥಾನಗಳನ್ನು ಭಾರತೀಯರಿಬ್ಬರು ಆಕ್ರಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಐದು ಪಂದ್ಯ ಸರಣಿಯಲ್ಲಿ ಜಡೇಜಾ 26 ವಿಕೆಟ್ ಪಡೆದರೆ, ಅಶ್ವಿನ್ 28 ವಿಕೆಟ್‌ಗಳನ್ನು ಗಳಿಸಿದ್ದರು. ಈ ಇಬ್ಬರು ಸ್ಪಿನ್ನರ್‌'ಗಳ ಸಾಂಘಿಕ ಬೌಲಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ ವಿರುದ್ಧ 4-0 ಅಂತರದ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಕನ್ನಡಿಗರ ಜಿಗಿತ

ಇನ್ನು ಬ್ಯಾಟ್ಸ್‌ಮನ್‌'ಗಳ ಪಟ್ಟಿಯಲ್ಲಿ ಕನ್ನಡಿಗರಾದ ಕೆ.ಎಲ್. ರಾಹುಲ್ ಹಾಗೂ ಕರುಣ್ ನಾಯರ್ ಶ್ರೇಯಾಂಕದಲ್ಲಿ ಜಗಿತ ಕಂಡಿದ್ದಾರೆ. ಕೊನೆಯ ಪಂದ್ಯದಲ್ಲಿ 199 ರನ್‌'ಗೆ ವಿಕೆಟ್ ಒಪ್ಪಿಸಿ ದ್ವಿಶತಕ ವಂಚಿತವಾದ ರಾಹುಲ್ 29 ಸ್ಥಾನಗಳ ಜಿಗಿತದೊಂದಿಗೆ ವೃತ್ತಿಬದುಕಿನ ಶ್ರೇಷ್ಠ 51ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರೆ, ಅಜೇಯ 303 ರನ್ ಗಳಿಸಿದ ಕರುಣ್ ನಾಯರ್ 122 ಸ್ಥಾನಗಳ ಜಿಗಿತದಿಂದ 55ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.