ಕಳೆದ ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಈ ಬಾರಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇದೀಗ ಪುಣೆ ವಿರುದ್ಧ ಗೆಲುವಿನ ನಗೆ ಬೀರಿದೆ.
ಪುಣೆ(ನ.27): ಬಾರ್ತಲೋಮ್ಯೊ ಒಗ್ಬಚೆ (23ನೇ ನಿಮಿಷ) ಹಾಗೂ ಜುವಾನ್ ಮಾಸ್ಕಿಯ (90ನೇ ನಿಮಿಷ ) ಗಳಿಸಿದ ಗೋಲಿನಿಂದ ಆತಿಥೇಯ ಎಫ್ ಸಿ ಪುಣೆ ಸಿಟಿ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ 2-0 ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿದೆ.
ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಕಳೆದ ಬಾರಿ ಅತ್ಯಂತ ಹಗುರವಾಗಿ ಪರಿಗಣಿಸಲಾಗಿತ್ತು. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವು ಫೇವರಿಟ್ ತಂಡಗಳಲ್ಲಿ ಒಂದಾಗಿ ರೂಪುಗೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಾರ್ತಲೋಮ್ಯೊ ಒಗ್ಬಚೆ. 23ನೇ ನಿಮಿಷದಲ್ಲಿ ಒಗ್ಬಚೆ ಗಳಿಸಿದ ಗೋಲಿನಿಂದ ಪ್ರವಾಸಿ ತಂಡ ನಾರ್ತ್ ಈಸ್ಟ್ ಯುನೈಟೆಡ್ ಮೇಲುಗೈ ಸಾಧಿಸಿತು.
21ನೇ ನಿಮಿಷದಲ್ಲಿ ಬಾರ್ತಲೋಮ್ಯೊ ಒಗ್ಬಚೆಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಕಮಲ್ಜಿತ್ ಸಿಂಗ್ ಉತ್ತಮ ರೀತಿಯಲ್ಲಿ ತಡೆದು ಆರಂಭಿಕ ತಡೆಯೊಡ್ಡಿದರು. 23ನೇ ನಿಮಿಷದಲ್ಲಿ ಒಗ್ಬಚೆಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ನಾರ್ತ್ ಈಸ್ಟ್ ಪರ 8ನೇ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಫೆಡರಿಕೊ ಗಲೆಗೋ ನೀಡಿದ ಕಾರ್ನರ್‌ನಿಂದ ನೀಡಿದ ಪಾಸ್ ಎಲ್ಲರನ್ನೂ ದಾಟಿ ಒಗ್ಬಚೆ ಅವರ ನಿಯಂತ್ರಣಕ್ಕೆ ಸಿಕ್ಕಿತು. ಎದೆಯಲ್ಲೇ ಚೆಂಡನ್ನು ನಿಯಂತ್ರಿಸಿದ ಒಗ್ಬಚೆ ನೇರವಾಗಿ ಗೋಲ್‌ಬಾಕ್ಸ್‌ಗೆ ತಳ್ಳಿದರು. ಇದರೊಂದಿಗೆ ಪ್ರಸಕ್ತ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಸಮಬಲ ಸಾಧಿಸಿದರು. ಗೋವಾದ ಫೆರಾನ್ ಕೊರೊಮಿನಾಸ್ ಕೂಡ 8 ಗೋಲುಗಳನ್ನು ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ.
