ಇಂಗ್ಲೆಂಡ್ ವಿರುದ್ಧ ಇಶಾಂತ್ ಶರ್ಮಾ ಬೌಲಿಂಗ್ ದಾಳಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ. ಸಚಿನ್ ಮಾತಿಗೆ ಇಶಾಂತ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಕ್ರಿಕೆಟ್ ದೇವರಿಗೆ ಇಶಾಂತ್ ಹೇಳಿದ್ದೇನು? ಇಲ್ಲಿದೆ .
ಎಡ್ಜ್‌ಬಾಸ್ಟನ್(ಆ.04): ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಹಿರಿಯ ವೇಗಿಯ ಪ್ರದರ್ಶನವನ್ನ ಕೊಂಡಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಇಶಾಂಶ್ ಶರ್ಮಾ ಪ್ರಮುಖ 5 ವಿಕೆಟ್ ಕಬಳಿಸಿದ್ದರು. ಈ ಮೂಲಕ ಇಂಗ್ಲೆಂಡ್ 180 ರನ್‌ಗಳಿಗೆ ಆಲೌಟ್ ಆಗಿತ್ತು. ಇಶಾಂತ್ ಶರ್ಮಾ ಅದ್ಬುತ ದಾಳಿಗೆ ಸಚಿನ್ ತೆಂಡೂಲ್ಕರ್ ಟ್ವೀಟ್ ಮೂಲಕ ಪ್ರಶಂಸಿದ್ದಾರೆ.
ಇಶಾಂತ್, ಅದ್ಬುತ ಪ್ರದರ್ಶನ. 2014ರ ಲಾರ್ಡ್ಸ್ ಪ್ರದರ್ಶನವನ್ನ ಮತ್ತೆ ನೆನಪಿಸುವಂತಿತ್ತು ಇಶಾಂತ್ ಬೌಲಿಂಗ್ ದಾಳಿ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ. ಸಚಿನ್ ಟ್ವೀಟ್‌ಗೆ ಇಶಾಂತ್ ಪ್ರತಿಕ್ರಿಯಿಸಿದ್ದಾರೆ. ಸಚಿನ್ ಪ್ರಶಂಸೆಗೆ ವೇಗಿ ಇಶಾಂತ್ ಧನ್ಯವಾದ ಅರ್ಪಿಸಿದ್ದಾರೆ. ಇಷ್ಟೇ ಅಲ್ಲ, ಕ್ರಿಕೆಟ್ ದೇವರ ಈ ಮಾತುಗಳು ಮತ್ತಷ್ಟು ಸ್ಪೂರ್ತಿ ತುಂಬಲಿದೆ ಎಂದು ಇಶಾಂತ್ ಹೇಳಿದ್ದಾರೆ.
