ನಾಗ್ಪುರ[ಫೆ.14]: ಹಾಲಿ ರಣಜಿ, ಇರಾನಿ ಟ್ರೋಫಿ ಚಾಂಪಿಯನ್‌ ವಿದರ್ಭ 2018-19ರ ಇರಾನಿ ಟ್ರೋಫಿ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಹಿನ್ನಡೆ ಅನುಭವಿಸುವ ಭೀತಿಗೆ ಸಿಲುಕಿದೆ. ಶೇಷ ಭಾರತ (ರೆಸ್ಟ್‌ ಆಫ್‌ ಇಂಡಿಯಾ) ವಿರುದ್ಧ ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 2ನೇ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ನಷ್ಟಕ್ಕೆ 245 ರನ್‌ ಗಳಿಸಿದ್ದು, ಇನ್ನೂ 85 ರನ್‌ಗಳಿಂದ ಹಿಂದಿದೆ. ಮೊದಲ ದಿನ ಶೇಷ ಭಾರತ ತಂಡ 330 ರನ್‌ಗಳಿಗೆ ಆಲೌಟ್‌ ಆಗಿತ್ತು.

ವಿಕೆಟ್‌ ಕೀಪರ್‌ ಅಕ್ಷಯ್‌ ವಾಡ್ಕರ್‌ (ಅಜೇಯ 50) ಹಾಗೂ ಆಲ್ರೌಂಡರ್‌ ಅಕ್ಷಯ್‌ ಕರ್ನೇವಾರ್‌ (ಅಜೇಯ 15) 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ವಿದರ್ಭಕ್ಕೆ ಮುನ್ನಡೆ ಒದಗಿಸುವ ಜವಾಬ್ದಾರಿ ಹೊತ್ತಿದ್ದಾರೆ. ಹಾಲಿ ಚಾಂಪಿಯನ್‌ ತಂಡದ ಆರಂಭಿಕರಾದ ನಾಯಕ ಫೈಯಜ್‌ ಫಜಲ್‌ (27) ಹಾಗೂ ಸಂಜಯ್‌ ರಾಮಸ್ವಾಮಿ (65) ನಿರಾಯಾಸವಾಗಿ ಬ್ಯಾಟ್‌ ಮಾಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 50 ರನ್‌ ಜೊತೆಯಾಟವಾಡಿದರು.

ದೊಡ್ಡ ಇನ್ನಿಂಗ್ಸ್‌ ಕಟ್ಟುವ ವಿಶ್ವಾಸದಲ್ಲಿದ್ದ ವಿದರ್ಭ ಆಸೆಗೆ ಕರ್ನಾಟಕದ ಆಫ್‌ ಸ್ಪಿನ್ನರ್‌ ಕೆ.ಗೌತಮ್‌ ತಣ್ಣೀರೆರೆಚಿದರು. ಫಜಲ್‌, ಗೌತಮ್‌ ಎಸೆತದಲ್ಲಿ ಕೀಪರ್‌ ಇಶಾನ್‌ ಕಿಶನ್‌ಗೆ ಕ್ಯಾಚಿತ್ತು ಔಟಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅಥರ್ವ ಟೈಡೆ (15) ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಯುವ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಾಹರ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಆದರೆ ಅನುಭವಿ ಬ್ಯಾಟ್ಸ್‌ಮನ್‌, ಕನ್ನಡಿಗ ಗಣೇಶ್‌ ಸತೀಶ್‌ ಹಾಗೂ ಸಂಜಯ್‌ 4ನೇ ವಿಕೆಟ್‌ಗೆ 64 ರನ್‌ ಜೊತೆಯಾಟವಾಡಿ ವಿದರ್ಭಕ್ಕೆ ಚೇತರಿಕೆ ನೀಡಿದರು. ಗಣೇಶ್‌ 4 ಬೌಂಡರಿ, 1 ಸಿಕ್ಸರ್‌ ಬಾರಿಸಿದರೆ, ಸಂಜಯ್‌ 9 ಬೌಂಡರಿಗಳನ್ನು ಗಳಿಸಿದರು.

ಸಂಜಯ್‌ ವಿಕೆಟ್‌ ಪತನಗೊಂಡ ಬಳಿಕ ವಿದರ್ಭ ಕೆಲವೇ ಓವರ್‌ಗಳ ಅಂತರದಲ್ಲಿ ಮತ್ತೆರಡು ವಿಕೆಟ್‌ ಕಳೆದುಕೊಂಡಿತು. ಮೋಹಿತ್‌ ಕಾಳೆ (01) ಹಾಗೂ ಗಣೇಶ್‌ (48) ಔಟಾದರು. 146ಕ್ಕೆ 3ರಿಂದ ವಿದರ್ಭ 168ಕ್ಕೆ 5ಕ್ಕೆ ಕುಸಿಯಿತು.

ಬಳಿಕ 24 ವರ್ಷದ ಅಕ್ಷಯ್‌ ವಾಡ್ಕರ್‌ ಕ್ರೀಸ್‌ನಲ್ಲಿ ನೆಲೆಯೂರಲು ಕೆಲ ಸಮಯ ತೆಗೆದುಕೊಂಡರು. ಆದಿತ್ಯ ಸರ್ವಾಟೆ (18) ಜತೆ ಸೇರಿ ಹೋರಾಟ ಆರಂಭಿಸಿದರು. ದಿನದಾಟದ ಮುಕ್ತಾಯಕ್ಕೆ 4 ಓವರ್‌ ಬಾಕಿ ಇದ್ದಾಗ ಸರ್ವಾಟೆ ವಿಕೆಟ್‌ ಚೆಲ್ಲಿದರು. ವೇಗಿ ಅಂಕಿತ್‌ ರಜಪೂತ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದು ಪೆವಿಲಿಯನ್‌ ಸೇರಿದರು. ಎದುರಾಳಿಯ ಮೇಲೆ ಹಿಡಿತ ಸಾಧಿಸಿದ ಶೇಷ ಭಾರತ, ಇದರ ಲಾಭವೆತ್ತಿ 2ನೇ ದಿನವೇ ರಣಜಿ ಚಾಂಪಿಯನ್ನರನ್ನು ಆಲೌಟ್‌ ಮಾಡಲು ಯತ್ನಿಸಿತು. ಆದರೆ ವಾಡ್ಕರ್‌ ಹಾಗೂ ಕರ್ನೇವಾರ್‌ ಅವಕಾಶ ನೀಡಲಿಲ್ಲ. ಈ ಇಬ್ಬರು ಮುರಿಯದ 7ನೇ ವಿಕೆಟ್‌ಗೆ 19 ರನ್‌ ಸೇರಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಶೇಷ ಭಾರತದ ಪರ ಸೌರಾಷ್ಟ್ರದ ಎಡಗೈ ಸ್ಪಿನ್ನರ್‌ ಧರ್ಮೇಂದ್ರ ಜಡೇಜಾ ಹಾಗೂ ಕರ್ನಾಟಕದ ಕೆ.ಗೌತಮ್‌ ತಲಾ 2 ವಿಕೆಟ್‌ ಕಿತ್ತರೆ, ಉತ್ತರ ಪ್ರದೇಶ ವೇಗಿ ಅಂಕಿತ್‌ ರಜಪೂತ್‌ ಹಾಗೂ ರಾಜಸ್ಥಾನದ ಯುವ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಾಹರ್‌ ತಲಾ 1 ವಿಕೆಟ್‌ ಪಡೆದರು.

ಪಂದ್ಯದ 3ನೇ ದಿನವಾದ ಗುರುವಾರ ಶೇಷ ಭಾರತ ಮೊದಲ ಅವಧಿಯಲ್ಲೇ ವಿದರ್ಭವನ್ನು ಆಲೌಟ್‌ ಮಾಡಿ, 2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆಹಾಕುವ ಗುರಿ ಹೊಂದಿದೆ.
ಕಾಡಿದ ಜಾಫರ್‌ ಅನುಪಸ್ಥಿತಿ

ಸಣ್ಣ ಪ್ರಮಾಣದ ಗಾಯದ ಕಾರಣ ಈ ಪಂದ್ಯಕ್ಕೆ ಅಲಭ್ಯರಾಗಿರುವ ಹಿರಿಯ ಬ್ಯಾಟ್ಸ್‌ಮನ್‌ ವಾಸೀಂ ಜಾಫರ್‌ ಅನುಪಸ್ಥಿತಿ ವಿದರ್ಭ ತಂಡವನ್ನು ದೊಡ್ಡ ಮಟ್ಟದಲ್ಲಿ ಕಾಡಿತು. ಉತ್ತಮ ಆರಂಭ ಪಡೆದ ಬಳಿಕ ರನ್‌ ಗಳಿಕೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆ 3ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಮೇಲಿರಲಿದೆ. ಜಾಫರ್‌ ಈ ಋುತುವಿನುದ್ದಕ್ಕೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಅವರ ಬದಲಿಗೆ ಆಡುತ್ತಿರುವ 20 ವರ್ಷದ ಅಥರ್ವ ಟೈಡೆ, ತಂಡದ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಸ್ಕೋರ್‌:

ಶೇಷ ಭಾರತ 330, 
ವಿದರ್ಭ (2ನೇ ದಿನದಂತ್ಯಕ್ಕೆ) 245/6 
(ಸಂಜಯ್‌ 65, ಅಕ್ಷಯ್‌ ವಾಡ್ಕರ್‌ 50*, ಗಣೇಶ್‌ ಸತೀಶ್‌ 48, ಜಡೇಜಾ 2-66, ಗೌತಮ್‌ 2-33)