ನಾಗ್ಪುರ(ಫೆ.15): ಹಾಲಿ ರಣಜಿ ಹಾಗೂ ಇರಾನಿ ಟ್ರೋಫಿ ಚಾಂಪಿಯನ್ ವಿದರ್ಭ ತಂಡ, ಇಲ್ಲಿ ನಡೆಯುತ್ತಿರುವ ಇರಾನಿ ಟ್ರೋಫಿ ಪಂದ್ಯದಲ್ಲಿ ಅಕ್ಷಯ್ ಕರ್ನೇವಾರ್ ಅವರ ಅಮೋಘ ಶತಕದ ನೆರವಿನಿಂದ ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 95 ರನ್‌ಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಹಿನ್ನಡೆಯೊಂದಿಗೆ 3ನೇ ಇನ್ನಿಂಗ್ಸ್ ಆರಂಭಿಸಿರುವ ಶೇಷ ಭಾರತ 3ನೇ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 102 ರನ್‌ಗಳಿಸಿದ್ದು, 7 ರನ್‌ಗಳ ಅಲ್ಪ ಮುನ್ನಡೆ ದೊರೆತಿದೆ.

ಕರ್ನೇವಾರ್ ಶತಕದ ಆಸರೆ:

245 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಸಿಲುಕಿದ್ದ ವಿದರ್ಭ ತಂಡಕ್ಕೆ ಅಕ್ಷಯ್ ಕರ್ನೇವಾರ್ ಶತಕದ ಮೂಲಕ ಪಾರು ಮಾಡಿದರು. ಬಾಲಂಗೋಚಿ ಬ್ಯಾಟ್ಸ್’ಮನ್‌ಗಳೊಂದಿಗೆ ಉತ್ತಮ ಜೊತೆಯಾಟ ನಿರ್ವಹಿಸಿದರು. 8ನೇ ವಿಕೆಟ್‌ಗೆ ವಾಖರೆ ಜೊತೆಯಲ್ಲಿ ಕರ್ನೇವಾರ್ ತಂಡದ ಮೊತ್ತ ಹೆಚ್ಚಿಸಿದರು. ಭರ್ಜರಿ ಬ್ಯಾಟಿಂಗ್ ನಡೆಸಿದ ಕರ್ನೇವಾರ್ 133 ಎಸೆತಗಳಲ್ಲಿ 102 ರನ್ ಗಳಿದರು. ವಾಖರೆ (20), ರಜನೀಶ್ ಗುರ್ಬಾನಿ ಅಜೇಯ (28), ಠಾಕೂರ್ (10) ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್:

ಶೇಷ ಭಾರತ 330/10, ಹಾಗೂ 102/2

ವಿದರ್ಭ 425/10