ಟ್ರಾನ್ಸ್ ಸ್ಟಾಡಿಯಾ ಅರೇನಾದಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಟೂರ್ನಿಯ ಮೊದಲ ಸೆಮೀಸ್ ಪಂದ್ಯದಲ್ಲಿ ಇರಾನ್ ತಂಡ 28-22 ಅಂಕಗಳಿಂದ ಕೊರಿಯಾ ತಂಡವನ್ನು ಮಣಿಸಿತು. ಇದರೊಂದಿಗೆ ಇರಾನ್ ತಂಡ ವಿಶ್ವಕಪ್ ಕಬಡ್ಡಿಯಲ್ಲಿ ಮೂರನೇ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ಅಹಮದಾಬಾದ್(ಅ.21): ಪಂದ್ಯದುದ್ದಕ್ಕೂ ನಡೆದ ರೋಚಕ ಕಾದಾಟದಲ್ಲಿ ಕೊನೆಗೂ ಇರಾನ್ ತಂಡ, ವಿಶ್ವಕಪ್ ಕಬಡ್ಡಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಎದುರು 6 ಅಂಕಗಳ ಅಂತರದಲ್ಲಿ ಜಯ ಸಾಸಿತು.

ಇಲ್ಲಿನ ಟ್ರಾನ್ಸ್ ಸ್ಟಾಡಿಯಾ ಅರೇನಾದಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಟೂರ್ನಿಯ ಮೊದಲ ಸೆಮೀಸ್ ಪಂದ್ಯದಲ್ಲಿ ಇರಾನ್ ತಂಡ 28-22 ಅಂಕಗಳಿಂದ ಕೊರಿಯಾ ತಂಡವನ್ನು ಮಣಿಸಿತು. ಇದರೊಂದಿಗೆ ಇರಾನ್ ತಂಡ ವಿಶ್ವಕಪ್ ಕಬಡ್ಡಿಯಲ್ಲಿ ಮೂರನೇ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು. ಈ ಹಿಂದೆ 2004 ಮತ್ತು 2007ರಲ್ಲಿ ಇರಾನ್ ತಂಡ ಫೈನಲ್‌ಗೇರಿತ್ತು. ಇದೀಗ ಪ್ರಸಕ್ತ ಟೂರ್ನಿಯಲ್ಲಿ ಫೈನಲ್‌ಗೇರಿದ ಮೊದಲ ತಂಡ ಎನಿಸಿದೆ.

ಪಂದ್ಯದ ಆರಂಭದ 3 ನಿಮಿಷದವರೆಗೂ ಎರಡು ತಂಡಗಳು ರಕ್ಷಣೆಗೆ ಒತ್ತು ನೀಡಿದ್ದರಿಂದ ಯಾವುದೇ ಅಂಕಗಳಿಸಲಿಲ್ಲ. ನಂತರದ ಆಟದಲ್ಲಿ ಇರಾನ್ ನಾಯಕ ಮಾಡು ಇಲ್ಲವೇ ಮಡಿ ರೈಡಿಂಗ್‌ನಲ್ಲಿ ಅಂಕಗಳಿಸುವ ಮೂಲಕ 1-0ಯಿಂದ ಖಾತೆ ತೆರೆಯಿತು. 10ನೇ ನಿಮಿಷದಲ್ಲಿ ಕುನ್ ಲೀ ಯಶಸ್ವಿ ದಾಳಿಯಿಂದಾಗಿ ಕೊರಿಯಾಗೆ 4-3ರಿಂದ ಮುನ್ನಡೆ ಸಿಕ್ಕಿತು. ಇದೇ ಪ್ರಭಾವಿ ಆಟವನ್ನು ಮುಂದುವರಿಸಿದ ಕೊರಿಯಾ, ಇರಾನ್ ತಂಡವನ್ನು 12ನೇ ನಿಮಿಷದಲ್ಲಿ ಆಲೌಟ್‌ಗೆ ಗುರಿಪಡಿಸಿ 10-4ರಿಂದ ಮುನ್ನಡೆ ಪಡೆಯಿತು. ನಂತರದ ಆಟದಲ್ಲಿ ಇರಾನ್ ತಂಡದ ನಾಯಕ ಮಿರಾಜ್ ಪ್ರಭಾವಿಯುತ ಆಟದ ಮೂಲಕ ತಂಡದ ಅಂಕವನ್ನು ಹೆಚ್ಚಿಸಿದರು. ಆದರೂ ಮೊದಲಾರ್ಧದ ಆಟದಲ್ಲಿ ಕೊರಿಯಾ 13-11ರಿಂದ ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದ ಆಟದಲ್ಲಿ ಅದೇ ಪ್ರಭಾವಿಯುತ ಆಟವನ್ನು ಮುಂದುವರಿಸಿದ ಇರಾನ್ 22ನೇ ನಿಮಿಷದಲ್ಲಿ ಕೊರಿಯಾವನ್ನು ಆಲೌಟ್‌ಗೆ ಗುರಿಪಡಿಸಿ ಲೋನಾ ಅಂಕದೊಂದಿಗೆ 15-15ರಿಂದ ಸಮಬಲ ಸಾಧಿಸಿತು. ನಂತರದ ಆಟದಲ್ಲಿ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಅಂಕಗಳಿಸುತ್ತ ಸಾಗಿದ ಇರಾನ್ 30 ನೇ ನಿಮಿಷದಲ್ಲಿ 21-17ರಿಂದ ಮುನ್ನಡೆ ಪಡೆಯಿತು. ಪಂದ್ಯ ಮುಕ್ತಾಯಕ್ಕೆ ಇನ್ನು 4 ನಿಮಿಷಗಳು ಬಾಕಿ ಇದ್ದಾಗ ಇರಾನ್‌ನ ಗೊಲಂ ಅಬ್ಬಾಸ್ ಕೊರುಕಿ ಸೂಪರ್ ರೈಡಿಂಗ್ ಮೂಲಕ ತಂಡಕ್ಕೆ 26-20 ಅಂಕಗಳಿಂದ ಮುನ್ನಡೆ ತಂದುಕೊಟ್ಟರು. ಮುಂದಿನ ಆಟದಲ್ಲೂ ಇದೇ ಅಂತರವನ್ನು ಕಾಯ್ದುಕೊಂಡ ಇರಾನ್ 6 ಅಂಕಗಳ ಅಂತರದಲ್ಲಿ ಕೊರಿಯಾ ತಂಡವನ್ನು ಮಣಿಸಿತು.

ಗೊಂದಲ ಸೃಷ್ಟಿಸಿದ ಅಂಪೈರ್‌ಗಳು

ಉಪಾಂತ್ಯದ ಪಂದ್ಯದಲ್ಲಿ ಲೈನ್ ಅಂಪೈರ್‌ಗಳು ಗೊಂದಲದಲ್ಲಿಯೇ ತೀರ್ಪು ನೀಡಿದರು. ಇದು ಇರಾನ್ ತಂಡದ ಆಟಗಾರನ್ನು ಅಂಕದಿಂದ ವಂಚಿಸುತ್ತಿದ್ದ ಹಾಗೆ ಗೋಚರಿಸುತ್ತಿತ್ತು. ಮೊದಲಾರ್ಧದ 11ನೇ ನಿಮಿಷದಲ್ಲಿ ಕೊರಿಯಾ ರೈಡರ್ ಜಾಂಗ್ ಕುನ್ ಲೀ ರೈಡಿಂಗ್‌ಗೆ ಬಂದಿದ್ದಾಗ, ಇರಾನ್ ಪಾಳಯದಲ್ಲಿ ಇಬ್ಬರು ಆಟಗಾರರಿದ್ದರು. ಕುನ್ ಲೀ ಅವರನ್ನು ಇರಾನ್ ಆಟಗಾರರು ಅದ್ಭುತವಾಗಿ ಟ್ಯಾಕಲ್ ಮಾಡಿದರು. ಆದರೂ ಕುನ್‌ಲೀ ಕೊಸರಾಡಿಕೊಂಡು ಲೈನನ್ನು ಮುಟ್ಟಿಲ್ಲದಿದ್ದರೂ ಅಂಪೈರ್ ಕೊರಿಯಾವನ್ನು ಆಲೌಟ್‌ಗೆ ಗುರಿಪಡಿಸಿದ್ದರು. ಇರಾನ್ ಆಟಗಾರರು 3ನೇ ಅಂಪೈರ್‌ಗೆ ಕೇಳಿದಾಗ ರೀವೀವ್ ನೋಡಿ 1 ಔಟ್ ಎಂದು ನೀಡಲಾಗಿತ್ತು. ಹಾಗೆ ಕೆಲ ಗೊಂದಲಮಯ ನಿರ್ಣಯಗಳಿಂದ ಇರಾನ್ ತಂಡ ಹಿನ್ನಡೆ ಅನುಭವಿಸಿತ್ತು.