Asianet Suvarna News Asianet Suvarna News

IPL Josh: ಐಪಿಎಲ್’ನಲ್ಲಿ ಈ ಪಾಕ್ ಕ್ರಿಕೆಟಿಗ ನಿರ್ಮಿಸಿದ ದಾಖಲೆ ನೆನಪಿದೆಯಾ..?

ಕ್ರಿಕೆಟ್’ನಲ್ಲಿ ಕೆಲವು ದಾಖಲೆಗಳು ಅಳಿಸಿ ಹೋಗುತ್ತವೆ, ಮತ್ತಷ್ಟು ಹೊಸ ದಾಖಲೆಗಳು ನಿರ್ಮಾಣವಾಗುತ್ತಲೇ ಹೋಗುತ್ತವೆ. ಈ ನಿಟ್ಟಿನಲ್ಲಿ ಕಳೆದ 11 ಆವೃತ್ತಿಗಳಲ್ಲಿ ನಿರ್ಮಾಣವಾದ ಐಪಿಎಲ್'ನ 5 ಅಪರೂಪದ ದಾಖಲೆಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

IPL Top 5 Unique Records 2008 to 2018
Author
Bengaluru, First Published Mar 23, 2019, 3:38 PM IST

ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಅದರಲ್ಲಿ ಕೆಲವು ದಾಖಲೆಗಳು ಅಳಿಸಿ ಹೋಗುತ್ತವೆ, ಮತ್ತಷ್ಟು ಹೊಸ ದಾಖಲೆಗಳು ನಿರ್ಮಾಣವಾಗುತ್ತಲೇ ಹೋಗುತ್ತವೆ. 

ಅದರಲ್ಲೂ ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ಸ್ಮರಣೀಯ ದಾಖಲೆಗಳು ನಿರ್ಮಾಣವಾಗಿವೆ. ಭಾರತೀಯರ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಕಳೆದ 11 ಆವೃತ್ತಿಯನ್ನು ಪೂರೈಸಿದ್ದು ಮೇ.23ರಂದು ಮತ್ತೊಮ್ಮೆ ಭಾರತೀಯರ ಮನೆ-ಮನಗಳಿಗೆ ಲಗ್ಗೆಯಿಡಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಕಳೆದ 11 ಆವೃತ್ತಿಗಳಲ್ಲಿ ನಿರ್ಮಾಣವಾದ ಐಪಿಎಲ್'ನ 5 ಅಪರೂಪದ ದಾಖಲೆಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

1 ಸೋಹಿಲ್ ತನ್ವೀರ್- ಅತಿ ಹೆಚ್ಚು ವಿಕೆಟ್ ಪಡೆದ ಪಾಕ್ ವೇಗಿ

IPL Top 5 Unique Records 2008 to 2018

ಪಾಕಿಸ್ತಾನ ತಂಡದ ಕ್ರಿಕೆಟಿಗರು 2008ರ ಐಪಿಎಲ್'ನಲ್ಲಿ ಪಾಲ್ಗೊಂಡಿದ್ದರು. ಈ ಆವೃತ್ತಿಯಲ್ಲಿ ಪಾಕ್ ವೇಗಿ ಸೋಹಿಲ್ ತನ್ವೀರ್ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರು. ರಾಜಸ್ಥಾನ ರಾಯಲ್ಸ್ ತಂಡದ ಪರ ಕಣಕ್ಕಿಳಿದಿದ್ದ ತನ್ವೀರ್ 11 ಪಂದ್ಯಗಳನ್ನಾಡಿ 22 ವಿಕೆಟ್ ಕಬಳಿಸಿ ಮಿಂಚಿದ್ದರು. ಇದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಮೊದಲ ಹಾಗೂ ಪಾಕಿಸ್ತಾನದ ಏಕೈಕ ಬೌಲರ್ ಎನ್ನುವ ಅಪರೂಪದ ದಾಖಲೆಯನ್ನು ತನ್ವೀರ್ ಬರೆದಿದ್ದಾರೆ.    

2 ಸುರೇಶ್ ರೈನಾ- ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗ

IPL Top 5 Unique Records 2008 to 2018

ಚುಟುಕು ಕ್ರಿಕೆಟ್'ನ ಸೂಪರ್'ಸ್ಟಾರ್ ಬ್ಯಾಟ್ಸ್'ಮನ್ ಸುರೇಶ್ ರೈನಾ ಚೆನ್ನೈ ಸೂಪರ್'ಕಿಂಗ್ಸ್ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್'ಮನ್ ಕೂಡಾ ಹೌದು. ಅದರಲ್ಲೂ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ರೈನಾ, ಅತಿ ಹೆಚ್ಚು ಪಂದ್ಯವನ್ನಾಡಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಇದುವರೆಗೂ 176 ಪಂದ್ಯಗಳನ್ನಾಡುವ ಮೂಲಕ ಐಪಿಎಲ್'ನಲ್ಲಿ ಅತಿಹೆಚ್ಚು ಬಾರಿ ಕಣಕ್ಕಿಳಿದ ಆಟಗಾರ ಎನಿಸಿದ್ದಾರೆ. ಆ ಬಳಿಕ ಧೋನಿ(175) ಎರಡನೇ ಸ್ಥಾನದಲ್ಲಿದ್ದಾರೆ.

3 ವಿರಾಟ್ ಕೊಹ್ಲಿ- 12 ಆವೃತ್ತಿಯಲ್ಲೂ ಒಂದೇ ತಂಡವನ್ನು ಪ್ರತಿನಿಧಿಸುತ್ತಿರುವ ಕ್ರಿಕೆಟಿಗ

IPL Top 5 Unique Records 2008 to 2018

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಪರೂಪದಲ್ಲೇ ಅಪರೂಪದ ದಾಖಲೆ ಹೊಂದಿದ್ದಾರೆ. 2008ರಲ್ಲಿ ಆರಂಭವಾದ ಐಪಿಎಲ್ ಟೂರ್ನಿಯಲ್ಲಿ ಒಂದೇ ಪ್ರಾಂಚೈಸಿ ಪರ 12 ಆವೃತ್ತಿಯಲ್ಲೂ ಆಡುತ್ತಿರುವ ಏಕೈಕ ಕ್ರಿಕೆಟಿಗ ಎನಿಸಿದ್ದಾರೆ. ಅಲ್ಲದೇ ಒಂದು ಆವೃತ್ತಿಯಲ್ಲಿ ಗರಿಷ್ಠ ರನ್ (973), ಗರಿಷ್ಠ ಶತಕ(4) ಸಿಡಿಸಿದ ಬ್ಯಾಟ್ಸ್'ಮನ್ ಎನ್ನುವ ದಾಖಲೆಯು ಕೊಹ್ಲಿ ಹೆಸರಿನಲ್ಲಿದೆ.

4 ಆರ್'ಸಿಬಿ: ಗರಿಷ್ಠ ಹಾಗೂ ಕನಿಷ್ಠ ಸ್ಕೋರ್

IPL Top 5 Unique Records 2008 to 2018

ಕಳೆದ 11 ಆವೃತ್ತಿಗಳಲ್ಲಿ ಪಾಲ್ಗೊಂಡು ಕಪ್ ಗೆಲ್ಲದ ಮೂರು ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಒಂದು. ಆದರೆ ಅಭಿಮಾನಿಗಳಿಗೆ ಅತಿ ಹೆಚ್ಚು ಮನರಂಜನೆ ನೀಡಿದ ತಂಡವು ಹೌದು ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಫೋಟಕ ಬ್ಯಾಟ್ಸ್'ಮನ್'ಗಳ ದಂಡನ್ನೇ ಹೊಂದಿದ್ದ ಆರ್'ಸಿಬಿ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಹಾಗೂ ಕನಿಷ್ಠ ರನ್ ಬಾರಿಸಿದ ದಾಖಲೆಯನ್ನು ಹೊಂದಿದೆ. 2013ರಲ್ಲಿ ಆರ್'ಸಿಬಿ     ಬೆಂಗಳೂರಿನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ 263/5 ರನ್ ಬಾರಿಸುವ ಮೂಲಕ ದಾಖಲೆ ಬರೆದಿತ್ತು. ಇನ್ನು 2017ರಲ್ಲಿ ಕೋಲ್ಕತಾ ನೈಟ್'ರೈಡರ್ಸ್ ವಿರುದ್ಧ ಕೇವಲ 49 ರನ್'ಗಳಿಗೆ ಆಲೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದ್ದಲ್ಲದೇ, ಕನಿಷ್ಠ ರನ್ ಬಾರಿಸಿದ ಅಪಖ್ಯಾತಿಗೂ ಆರ್'ಸಿಬಿ ಪಾತ್ರವಾಗಿದೆ. 

5 ಕ್ರಿಸ್ ಗೇಲ್:  ಸಿಕ್ಸ್'ಗಳಲ್ಲೇ ಶತಕ

IPL Top 5 Unique Records 2008 to 2018

ಕೆರಿಬಿಯನ್ ದೈತ್ಯ ಕ್ರಿಕೆಟಿಗ ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ಪರಿಚಯ ಬಹುತೇಕ ಎಲ್ಲಾ ಐಪಿಎಲ್ ಅಭಿಮಾನಿಗಳಿಗೂ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್'ಮನ್ ಆಗಿದ್ದ ಗೇಲ್ ಪ್ರಸ್ತುತ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2013ರಲ್ಲಿ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 66 ಎಸೆತಗಳಲ್ಲಿ ಬರೋಬ್ಬರಿ 175 ರನ್ ಬಾರಿಸಿ ದಾಖಲೆ ಬರೆದಿದ್ದರು. ಅವರ ಇನ್ನಿಂಗ್ಸ್'ನಲ್ಲಿ 17 ಮುಗಿಲೆತ್ತರ ಸಿಕ್ಸರ್'ಗಳು ಸೇರಿದ್ದವು. 17 ಸಿಕ್ಸರ್'ಗಳಿಂದಲೇ ಗೇಲ್ 102 ರನ್ ಕಲೆಹಾಕುವ ಮೂಲಕ ವಿನೂತನ ದಾಖಲೆಯನ್ನು ಗೇಲ್ ಬರೆದಿದ್ದರು. ಈ ರನ್ ಹೊಳೆಯ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಿತ್ತು. 
                
  

Follow Us:
Download App:
  • android
  • ios