ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಅವರನ್ನು ತಮ್ಮ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನುಲಾಗುತ್ತಿದೆ.

ಮುಂಬೈ(ನ.04): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ.

ಹೌದು, 2018ರ ಐಪಿಎಲ್‌'ನಲ್ಲಿ ತಾರಾ ಆಟಗಾರರು ತಮ್ಮ ತಮ್ಮ ತಂಡಗಳಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇದೆ. ಆಟಗಾರರ ಉಳಿಸಿಕೊಳ್ಳುವಿಕೆ ಪದ್ಧತಿಯನ್ನು ಮುಂದುವರಿಸಲು ಐಪಿಎಲ್ ಆಡಳಿತ ಸಮಿತಿ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಅವರನ್ನು ತಮ್ಮ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನುಲಾಗುತ್ತಿದೆ.

ಪ್ರತಿ ತಂಡಕ್ಕೆ ಕನಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಫ್ರಾಂಚೈಸಿ ನೀಡುವ ಪ್ರಸ್ತಾಪಕ್ಕೆ ಆಟಗಾರ ಒಪ್ಪಿಗೆ ಸೂಚಿಸಿದರಷ್ಟೇ ಆತನನ್ನು ಉಳಿಸಿಕೊಳ್ಳಬಹುದಾಗಿದೆ. ಹರಾಜಿನಲ್ಲಿ ಭಾಗವಹಿಸಬೇಕೋ ಬೇಡವೋ ಎನ್ನುವ ನಿರ್ಧಾರ ಸಂಪೂರ್ಣವಾಗಿ ಆಟಗಾರರದ್ದಾಗಿರುತ್ತದೆ ಎಂದು ಐಪಿಎಲ್ ಆಡಳಿತ ಸಮಿತಿ ಘೋಷಿಸುವ ಸಾಧ್ಯತೆ ಇದೆ.

ನ.21ರಂದು ಫ್ರಾಂಚೈಸಿ ಮಾಲೀಕರ ಜತೆ ಬಿಸಿಸಿಐ ಸಭೆ ನಡೆಸಲಿದ್ದು, ಅಂದು ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಮುಂಬೈ ತಂಡ ತೊರೆದು ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸಿದ್ದಾರೆ ಎನ್ನಲಾಗಿದೆ.