ನವದೆಹಲಿ[ಮಾ.24]: ಭಾರತದ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ನಾಯಕ ವಿರಾಟ್‌ ಕೊಹ್ಲಿಯನ್ನು ಭಯವಂತೆ. ‘ನನಗೆ ಯಾರನ್ನು ಕಂಡರೂ ಭಯವಿಲ್ಲ. ಆದರೆ ವಿರಾಟ್‌ ಕೊಹ್ಲಿ ಕೋಪಗೊಂಡಾಗ ಭಯವಾಗುತ್ತದೆ’ ಎಂದು ಪಂತ್‌ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಕಿರುವ ವಿಡಿಯೋನಲ್ಲಿ ಹೇಳಿಕೊಂಡಿದ್ದಾರೆ. 

‘ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದರೆ ಅವರಿಗೇಕೆ ಕೋಪ ಬರುತ್ತದೆ. ಆದರೆ ತಪ್ಪು ಮಾಡಿದಾಗ ನಮ್ಮ ಮೇಲೆ ಯಾರಾದರೂ ಕೋಪ ಮಾಡಿಕೊಂಡರೆ, ಅದರಿಂದ ಪಾಠ ಕಲಿತುಕೊಳ್ಳಬೇಕು’ ಎಂದು ಪಂತ್‌ ಹೇಳಿದ್ದಾರೆ.

ಕಳೆದೆರಡು ಆವೃತ್ತಿಗಳಲ್ಲಿ ಡೆಲ್ಲಿ ತಂಡದಲ್ಲಿ ಪ್ರಮುಖ ಪಾತ್ರ ನಿಭಾಯಿಸಿರುವ ಪಂತ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಕಳೆದ ಆರು ಆವೃತ್ತಿಗಳಲ್ಲಿ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಶ್ರೇಯಸ್ ಅಯ್ಯರ್ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.