ಮುಂಬೈ: 2013, 2015, 2017.. ಹೀಗೆ ಒಂದು ವರ್ಷ ಚಾಂಪಿಯನ್‌ ಮತ್ತೊಂದು ವರ್ಷ ಪ್ಲೇ-ಆಫ್‌ಗೂ ಪ್ರವೇಶಿಸದ ಮುಂಬೈ ಇಂಡಿಯನ್ಸ್‌ ಈ ವರ್ಷ ಮತ್ತೆ ಪ್ರಶಸ್ತಿ ಎತ್ತಿಹಿಡಿಯುವ ಲೆಕ್ಕಾಚಾರದಲ್ಲಿದೆ. 3 ಬಾರಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿರುವ ರೋಹಿತ್‌ ಶರ್ಮಾ ಈ ಸಲವೂ ಒತ್ತಡದಲ್ಲಿದ್ದಾರೆ. ವಿಶ್ವಕಪ್‌ಗೂ ಮುನ್ನ ಬ್ಯಾಟಿಂಗ್‌ ಲಯ ಕಾಯ್ದುಕೊಳ್ಳುವ ಒತ್ತಡ ಒಂದು ಕಡೆಯಾದರೆ, ಜಸ್ಪ್ರೀತ್‌ ಬುಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯರ ಕೆಲಸದ ಒತ್ತಡ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಯೂ ರೋಹಿತ್‌ ಮೇಲಿದೆ.

ಮತ್ತೊಂದೆಡೆ ಡೆಲ್ಲಿ ತಂಡ ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿಯುತ್ತಿದೆ. ಡೆಲ್ಲಿ ಡೇರ್‌ಡೆವಿಲ್ಸ್‌ ಎನ್ನುವ ಹೆಸರಿನೊಂದಿಗೆ ಇಷ್ಟು ವರ್ಷ ಕಣಕ್ಕಿಳಿದಿದ್ದ ತಂಡ, ಬಹುತೇಕ ಬಾರಿ ಕೊನೆ ಸ್ಥಾನ ಪಡೆದಿತ್ತು. ಈ ವರ್ಷ ತಂಡದ ಹೆಸರು ಡೆಲ್ಲಿ ಕ್ಯಾಪಿಟಲ್ಸ್‌ ಎಂದು ಬದಲಾಗಿದೆ. ಶ್ರೇಯಸ್‌ ಅಯ್ಯರ್‌ ತಂಡವನ್ನು ಮುನ್ನಡೆಸಲಿದ್ದು, ದೇಸಿ ತಾರಾ ಬ್ಯಾಟ್ಸ್‌ಮನ್‌ಗಳ ದಂಡೇ ಇದೆ.

ಸನ್‌ರೈಸ​ರ್ಸ್’ನಲ್ಲಿದ್ದ ಶಿಖರ್‌ ಧವನ್‌ ಈ ಬಾರಿ ಡೆಲ್ಲಿ ಪಾಲಾಗಿದ್ದಾರೆ. ರಿಷಭ್‌ ಪಂತ್‌, ಹನುಮ ವಿಹಾರಿ, ಪೃಥ್ವಿ ಶಾ ಬಲ ತಂಡಕ್ಕಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ ಕಾಲಿನ್‌ ಮನ್ರೊ ಸಹ ಡೆಲ್ಲಿ ಬ್ಯಾಟಿಂಗ್‌ ಶಕ್ತಿ ಎನಿಸಿದ್ದಾರೆ. ಬೌಲಿಂಗ್‌ನಲ್ಲಿ ತಂಡಕ್ಕೆ ಟ್ರೆಂಟ್‌ ಬೌಲ್ಟ್‌, ಇಶಾಂತ್‌ ಶರ್ಮಾ, ಕಗಿಸೋ ರಬಾಡ, ನಾಥು ಸಿಂಗ್‌ ನೆರವಾಗಲಿದ್ದಾರೆ. ನೇಪಾಳದ ಸ್ಪಿನ್ನರ್‌ ಸಂದೀಪ್‌ ಲಮಿಚ್ಚಾನೆ ಮೇಲೆ ನಿರೀಕ್ಷೆ ಇಡಲಾಗಿದೆ.

ರೋಹಿತ್‌ ಶರ್ಮಾ ಆರಂಭಿಕನಾಗಿ ಆಡಲಿದ್ದೇನೆ ಎಂದು ಘೋಷಿಸಿ ಈಗಾಗಲೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ದ.ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ ನಾಯಕನ ಜತೆ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಯುವರಾಜ್‌ ಸಿಂಗ್‌, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ ಆಡಲಿದ್ದಾರೆ. ಹಾರ್ದಿಕ್‌, ಕೃನಾಲ್‌ ಪಾಂಡ್ಯ, ಕಿರೊನ್‌ ಪೊಲ್ಲಾರ್ಡ್‌, ಬೆನ್‌ ಕಟ್ಟಿಂಗ್‌ರಂತಹ ಬಲಿಷ್ಠ ಆಲ್ರೌಂಡರ್‌ಗಳು ತಂಡದಲ್ಲಿದ್ದಾರೆ. ಮಯಾಂಕ್‌ ಮರ್ಕಂಡೆ, ಜಸ್ಪ್ರೀತ್‌ ಬುಮ್ರಾ ಹಾಗೂ ಮಿಚೆಲ್‌ ಮೆಕ್ಲನಾಘನ್‌ ಪ್ರಮುಖ ಬೌಲರ್‌ಗಳಾಗಿ ಆಡಲಿದ್ದಾರೆ.

ಲಿಸಿತ್‌ ಮಾಲಿಂಗ ತವರಿಗೆ ಮರಳಿದ್ದು, ಟೂರ್ನಿಯಲ್ಲಿ ಅವರ ಲಭ್ಯತೆ ಬಗ್ಗೆ ಮಾಹಿತಿ ಇಲ್ಲ. ನ್ಯೂಜಿಲೆಂಡ್‌ ವೇಗಿ ಆ್ಯಡಂ ಮಿಲ್ನೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪ್ರಮುಖ ಆಟಗಾರರು ಗಾಯಗೊಂಡಾಗ ಅವರ ಬದಲಿಗೆ ಸೂಕ್ತ ಆಟಗಾರರನ್ನು ಹೊಂದಿಸುವುದು ಮುಂಬೈಗೆ ಸವಾಲಾಗಬಹುದು.

ಒಟ್ಟು ಮುಖಾಮುಖಿ: 22

ಡೆಲ್ಲಿ: 11

ಮುಂಬೈ: 11

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಶಿಖರ್‌ ಧವನ್‌, ಪೃಥ್ವಿ ಶಾ, ಕಾಲಿನ್‌ ಇನ್‌ಗ್ರಾಂ, ಶ್ರೇಯಸ್‌ ಅಯ್ಯರ್‌(ನಾಯಕ), ರಿಷಭ್‌ ಪಂತ್‌, ಹನುಮ ವಿಹಾರಿ, ಅಕ್ಷರ್‌ ಪಟೇಲ್‌, ಅಮಿತ್‌ ಮಿಶ್ರಾ, ಸಂದೀಪ್‌ ಲಮಿಚ್ಚಾನೆ, ಟ್ರೆಂಟ್‌ ಬೌಲ್ಟ್‌, ಕಗಿಸೋ ರಬಾಡ.

ಮುಂಬೈ: ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌, ಎವಿನ್‌ ಲೀವಿಸ್‌, ಸೂರ್ಯಕುಮಾರ್‌, ಯುವರಾಜ್‌, ಪೊಲ್ಲಾರ್ಡ್‌, ಹಾರ್ದಿಕ್‌, ಕೃನಾಲ್‌ ಪಾಂಡ್ಯ, ಮಿಚೆಲ್‌ ಮೆಕ್ಲನಾಘನ್‌, ಮಯಾಂಕ್‌ ಮರ್ಕಂಡೆ, ಬುಮ್ರಾ.

ಪಿಚ್‌ ರಿಪೋರ್ಟ್‌: ವಾಂಖೇಡೆ ಕ್ರೀಡಾಂಗಣದ ಪಿಚ್‌ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಟಿ20 ಮಾದರಿಯಲ್ಲಿ ಬಹುತೇಕ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ಸ್ವಿಂಗ್‌ ಬೌಲಿಂಗ್‌ಗೆ ಸಹಕಾರ ಸಿಗಲಿದೆ. ಒಟ್ಟು 66 ಐಪಿಎಲ್‌ ಪಂದ್ಯಗಳು ನಡೆದಿದ್ದು, 33 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡ ಗೆದ್ದರೆ, 33 ಪಂದ್ಯಗಳನ್ನು ಮೊದಲು ಬೌಲ್‌ ಮಾಡಿದ ತಂಡ ಗೆದ್ದಿದೆ.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1