#IPL ಜೋಶ್: ಪರ್ಪಲ್ ಕ್ಯಾಪ್ ವಿಜೇತ ಬೌಲರ್’ಗಳಿವರು
ಕಳೆದ 11 ಆವೃತ್ತಿಗಳಲ್ಲಿ ಬ್ಯಾಟ್ಸ್’ಮನ್’ಗಳ ಅಬ್ಬರದ ನಡುವೆಯೂ ಕೆಲವು ಬೌಲರ್’ಗಳು ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸುವ ಮೂಲಕ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಪ್ರತಿ ಆವೃತ್ತಿಯಲ್ಲೂ ಅತಿ ಹೆಚ್ಚು ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೆದ್ದ ಬೌಲರ್’ಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದೆ ಮೆಲುಕು ಹಾಕುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್’ಗಳು ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗುತ್ತಾರೆ. ಚೊಚ್ಚಲ ಆವೃತ್ತಿಯ ಐಪಿಎಲ್’ನಲ್ಲಿ ಪಾಕಿಸ್ತಾನದ ವೇಗದ ಬೌಲರ್ ಸೋಹಿಲ್ ತನ್ವೀರ್ ಪರ್ಪಲ್ ಕ್ಯಾಪ್ ಗೆದ್ದುಕೊಂಡಿದ್ದರು.
ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ತನ್ವೀರ್ ಆಡಿದ 11 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಎರಡನೇ ಆವೃತ್ತಿಯಲ್ಲಿ ಟೀಂ ಇಂಡಿಯಾ ಮಾಜಿ ವೇಗಿ ಆರ್.ಪಿ ಸಿಂಗ್ 23 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್’ಗೆ ಮುತ್ತಿಕ್ಕಿದ್ದರು. ಇನ್ನು 2010ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಲೆಗ್ ಸ್ಪಿನ್ನರ್ ಪ್ರಗ್ಯಾನ್ ಓಜಾ 21 ವಿಕೆಟ್ ಪಡೆದು, ಐಪಿಎಲ್ ಇತಿಹಾಸದಲ್ಲೇ ಪರ್ಪಲ್ ಕ್ಯಾಪ್ ಗೆದ್ದ ಮೊದಲ ಸ್ಪಿನ್ನರ್ ಎನ್ನುವ ಗೌರವಕ್ಕೆ ಭಾಜನರಾದರು.
ಕಳೆದ 11 ಆವೃತ್ತಿಗಳಲ್ಲಿ ಬ್ಯಾಟ್ಸ್’ಮನ್’ಗಳ ಅಬ್ಬರದ ನಡುವೆಯೂ ಕೆಲವು ಬೌಲರ್’ಗಳು ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸುವ ಮೂಲಕ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಪ್ರತಿ ಆವೃತ್ತಿಯಲ್ಲೂ ಅತಿ ಹೆಚ್ಚು ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೆದ್ದ ಬೌಲರ್’ಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದೆ ಮೆಲುಕು ಹಾಕುತ್ತಿದೆ.
1. ಸೋಹಿಲ್ ತನ್ವೀರ್: 22 ವಿಕೆಟ್
ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ವೇಗದ ಬೌಲರ್ ಆಗಿ ಹೊರಹೊಮ್ಮಿದ್ದ ಸೋಹಿಲ್ ತನ್ವೀರ್ ಆಡಿದ 11 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿ ಮಿಂಚಿದ್ದರು. ಕರಾರುವಕ್ಕಾದ ಯಾರ್ಕರ್ ಹಾಗೂ ಬೌನ್ಸರ್’ಗಳ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸಿದ್ದ ಎಡಗೈ ವೇಗಿ ತನ್ವೀರ್, ರಾಜಸ್ಥಾನ ರಾಯಲ್ಸ್ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2.ಆರ್.ಪಿ ಸಿಂಗ್: 23 ವಿಕೆಟ್
ಡೆಕ್ಕನ್ ಚಾರ್ಜರ್ಸ್ ತಂಡದ ಎಡಗೈ ವೇಗಿ ರುದ್ರಪ್ರತಾಪ್ ಸಿಂಗ್ 16 ಪಂದ್ಯಗಳನ್ನಾಡಿ 23 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. 2ನೇ ಆವೃತ್ತಿಯಲ್ಲಿ ಗಿಲ್’ಕ್ರಿಸ್ಟ್ ನಾಯಕತ್ವದ ಡೆಕ್ಕನ್ ಚಾರ್ಜರ್ಸ್ ತಂಡ ಚಾಂಪಿಯನ್ ಆಗುವುದರಲ್ಲಿ ಆರ್.ಪಿ ಸಿಂಗ್ ಪಾತ್ರವನ್ನು ಮರೆಯುವಂತಿಲ್ಲ.
3. ಪ್ರಗ್ಯಾನ್ ಓಜಾ: 21 ವಿಕೆಟ್
ಮೂರನೇ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿ 21 ವಿಕೆಟ್ ಕಬಳಿಸಿದ ಡೆಕ್ಕನ್ ಚಾರ್ಜರ್ಸ್ ತಂಡದ ಲೆಗ್ ಸ್ಪಿನ್ನರ್ ಪ್ರಗ್ಯಾನ್ ಓಜಾ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಪರ್ಪಲ್ ಕ್ಯಾಪ್ ಪಡೆದ ಮೊದಲ ಹಾಗೂ ಏಕೈಕ ಸ್ಪಿನ್ನರ್ ಎನ್ನುವ ದಾಖಲೆಯು ಓಜಾ ಹೆಸರಿನಲ್ಲಿಯೇ ಇದೆ.
4. ಲಸಿತ್ ಮಾಲಿಂಗ: 28
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ವೇಗಿ ಲಸಿತ್ ಮಾಲಿಂಗ 16 ಪಂದ್ಯಗಳನ್ನಾಡಿ 28 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡರು. ಮೊದಲ ಮೂರು ಆವೃತ್ತಿಯಲ್ಲಿ ಎಡಗೈ ಬೌಲರ್’ಗಳೇ ಪರ್ಪಲ್ ಕ್ಯಾಪ್ ಗೆದ್ದು ಪ್ರಾಬಲ್ಯ ಸಾಧಿಸಿದ್ದರು. ಆದರೆ ಎಡಗೈ ಬೌಲರ್’ಗಳ ನಾಗಾಲೋಟಕ್ಕೆ ಮಾಲಿಂಗ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು.
5. ಮಾರ್ನೆ ಮಾರ್ಕೆಲ್: 25
ನೀಳಾಕಾಯದ ಡೆಲ್ಲಿ ಡೇರ್’ಡೆವಿಲ್ಸ್ ವೇಗಿ ಮಾರ್ನೆ ಮಾರ್ಕೆಲ್ 16 ಪಂದ್ಯಗಳನ್ನಾಡಿ 25 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಜಯಿಸಿದ ಸಾಧನೆ ಮಾಡಿದ್ದರು. ಮಾರ್ಕೆಲ್ ಅದ್ಭುತ ಪ್ರದರ್ಶನದ ಹೊರತಾಗಿಯೂ ಡೆಲ್ಲಿ ಟೂರ್ನಿಯಲ್ಲಿ ಜಯಿಸಿದ್ದು ಕೇವಲ 4 ಪಂದ್ಯಗಳನ್ನು ಮಾತ್ರ.
6. ಡ್ವೇನ್ ಬ್ರಾವೋ: 32 ವಿಕೆಟ್
ಚೆನ್ನೈ ಸೂಪರ್’ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ 2013ನೇ ಆವೃತ್ತಿಯ ಐಪಿಎಲ್’ನಲ್ಲಿ 18 ಪಂದ್ಯಗಳನ್ನಾಡಿ ಬರೋಬ್ಬರಿ 32 ವಿಕೆಟ್ ಕಬಳಿಸಿದ್ದರು. ಈ ಮೂಲಕ ಐಪಿಎಲ್ ಟೂರ್ನಿಯೊಂದರಲ್ಲಿ 30+ ವಿಕೆಟ್ ಪಡೆದ ಮೊದಲ ಹಾಗೂ ಏಕೈಕ ಬೌಲರ್ ಎನ್ನುವ ದಾಖಲೆ ಇಲ್ಲಿಯರೆಗೂ ಶಾಶ್ವತವಾಗಿ ಉಳಿದಿದೆ.
7. ಮೋಹಿತ್ ಶರ್ಮಾ: 23 ವಿಕೆಟ್
ಚೆನ್ನೈ ಸೂಪರ್’ಕಿಂಗ್ಸ್’ನ ಮತ್ತೋರ್ವ ವೇಗಿ ಮೋಹಿತ್ ಶರ್ಮಾ 16 ಪಂದ್ಯಗಳನ್ನಾಡಿ 23 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಜಯಿಸಿದರು. ಮೋಹಿತ್ ಅದ್ಭುತ ಬೌಲಿಂಗ್ ಹೊರತಾಗಿಯೂ ಸಿಎಸ್’ಕೆ ಫೈನಲ್ ಪ್ರವೇಶಿಸಲು ವಿಫಲವಾಗಿತ್ತು.
8. ಡ್ವೇನ್ ಬ್ರಾವೋ: 26 ವಿಕೆಟ್
ಸಿಎಸ್’ಕೆ ಆಲ್ರೌಂಡರ್ ಡ್ವೇನ್ ಬ್ರಾವೋ 17 ಪಂದ್ಯಗಳನ್ನಾಡಿ 26 ವಿಕೆಟ್ ಕಬಳಿಸುವ ಮೂಲಕ 2ನೇ ಬಾರಿಗೆ ಪರ್ಪಲ್ ಕ್ಯಾಪ್ ಜಯಿಸಿದರು. ಇದರ ಹೊರತಾಗಿಯೂ ಸಿಎಸ್’ಕೆ ಫೈನಲ್’ನಲ್ಲಿ ಮುಗ್ಗರಿಸಿತ್ತು.
9. ಭುವನೇಶ್ವರ್ ಕುಮಾರ್: 23 ವಿಕೆಟ್
ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ 17 ಪಂದ್ಯಗಳನ್ನಾಡಿ 23 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಜಯಿಸಿದ್ದರು. ಭುವಿ ಅಭೂತಪೂರ್ವ ಬೌಲಿಂಗ್ ನೆರವಿನಿಂದ ಸನ್’ರೈಸರ್ಸ್ ಹೈದರಾಬಾದ್ ಚೊಚ್ಚಲ ಐಪಿಎಲ್ ಕಪ್ ಜಯಿಸಿದ ಸಾಧನೆ ಮಾಡಿತ್ತು.
10. ಭುವನೇಶ್ವರ್ ಕುಮಾರ್: 26 ವಿಕೆಟ್
ಸತತ ಎರಡನೇ ಬಾರಿಗೆ ಪರ್ಪಲ್ ಕ್ಯಾಪ್ ಗೆದ್ದ ಏಕೈಕ ಬೌಲರ್ ಎನ್ನುವ ದಾಖಲೆ ಭುವನೇಶ್ವರ್ ಕುಮಾರ್ ಹೆಸರಿನಲ್ಲಿದೆ. 14 ಪಂದ್ಯಗಳಲ್ಲಿ ಭುವಿ 26 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು.
11. ಆ್ಯಂಡ್ರೂ ಟೈ: 24
ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮಾರಕ ವೇಗಿ ಆ್ಯಂಡ್ರೊ ಟೈ 2018ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ ಜಯಿಸಿದ ಸಾಧನೆ ಮಾಡಿದರು. ಆಡಿದ 14 ಪಂದ್ಯದಲ್ಲಿ 24 ವಿಕೆಟ್ ಕಬಳಿಸಿದ ಟೈ ಚೊಚ್ಚಲ ಬಾರಿಗೆ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.