RCB ಬ್ರ್ಯಾಂಡ್ ಮೌಲ್ಯ ಕುಸಿತ..! ಆದರೆ ಕೊಹ್ಲಿ ನಾಯಕತ್ವಕ್ಕಿಲ್ಲ ಕುತ್ತು..!
ಕಳೆದ 12 ಆವೃತ್ತಿಗಳಿಂದಲೂ ಐಪಿಎಲ್ ಚಾಂಪಿಯನ್ ಆಗಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ವ್ಯಾಲ್ಯೂ ಕುಸಿತಗೊಂಡಿದೆ. ಆದರೆ ನಾಯಕ ವಿರಾಟ್ ಕೊಹ್ಲಿಯೇ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಸೆ.20): ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ಮೌಲ್ಯ ಶೇ.8ರಷ್ಟುಕುಸಿತಗೊಂಡಿದೆ. 2018ರಲ್ಲಿ ₹ 647 ಕೋಟಿ ಇದ್ದ ಆರ್‌ಸಿಬಿ ತಂಡದ ಮೌಲ್ಯ ಈಗ 595 ಕೋಟಿ ರುಪಾಯಿಗೆ ಇಳಿಕೆಯಾಗಿದೆ. ನ್ಯೂಯಾರ್ಕ್ ಮೂಲದ ಡಫ್ ಅಂಡ್ ಫೆಲ್ಫ್ಸ್ ಎನ್ನುವ ಕಾರ್ಪೋರೇಟ್ ಹಣಕಾಸು ಸಲಹಾ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದು ಬಂದಿದೆ.
ಧೋನಿ IPL ಭವಿಷ್ಯ; CSK ಮಾಲೀಕ ಬಿಚ್ಚಿಟ್ಟ ಸೀಕ್ರೆಟ್!
ವಿಶ್ವದ ಶ್ರೀಮಂತ ಕ್ರಿಕೆಟಿಗ ವಿರಾಟ್ ಕೊಹ್ಲಿ ತಂಡದ ನಾಯಕನಾಗಿದ್ದರೂ, ಬ್ರ್ಯಾಂಡ್ ಮೌಲ್ಯ ಕುಸಿದಿರುವುದು ಅಚ್ಚರಿ ಮೂಡಿಸಿದೆ. ಆರ್‌ಸಿಬಿ ಮಾತ್ರವಲ್ಲ, ಬಾಲಿವುಡ್ ತಾರೆ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್), ರಾಜಸ್ಥಾನ ರಾಯಲ್ಸ್ ತಂಡದ ಬ್ರ್ಯಾಂಡ್ ಮೌಲ್ಯಕ್ಕೂ ಹೊಡೆತ ಬಿದ್ದಿದೆ.
ಸಿಎಸ್‌ಕೆಗೆ ಭರ್ಜರಿ ಲಾಭ: ಬೆಟ್ಟಿಂಗ್ ಪ್ರಕರಣದಲ್ಲಿ 2 ವರ್ಷ ನಿಷೇಧ ಅನುಭವಿಸಿದರೂ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರ್ಯಾಂಡ್ ಮೌಲ್ಯ ಭಾರೀ ಏರಿಕೆ ಕಂಡಿದೆ. ತಂಡ 11ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದು, ಎಂ.ಎಸ್.ಧೋನಿ ಉಪಸ್ಥಿತಿ ಈ ಬೆಳವಣಿಗೆಗೆ ಕಾರಣವಾಗಿದೆ. ಸಿಎಸ್‌ಕೆ ಮೌಲ್ಯ ಶೇ.13.1ರಷ್ಟು ಏರಿಕೆಯಾಗಿದ್ದರೆ, ಮುಂಬೈ ಇಂಡಿಯನ್ಸ್ ಮೌಲ್ಯ ಶೇ.8.5ರಷ್ಟು ಏರಿಕೆ ಕಂಡಿದೆ.
ಲೀಗ್ ಮೌಲ್ಯವೂ ಏರಿಕೆ: 2018ಕ್ಕೆ ಹೋಲಿಸಿದರೆ 2019ರ ಆವೃತ್ತಿ ಬಳಿಕ ಐಪಿಎಲ್ ಟೂರ್ನಿಯ ಒಟ್ಟಾರೆ ಬ್ರ್ಯಾಂಡ್ ಮೌಲ್ಯದಲ್ಲಿ ಭಾರೀ ಏರಿಕೆಯಾಗಿದೆ. 2018ರ ಆವೃತ್ತಿ ಮುಕ್ತಾಯದ ಬಳಿಕ ₹ 44 ಸಾವಿರ ಕೋಟಿಯಿದ್ದ ಮೌಲ್ಯ, ಸದ್ಯ ₹ 48 ಸಾವಿರ ಕೋಟಿಗೆ ಏರಿಕೆಯಾಗಿದೆ.
ಆರ್‌ಸಿಬಿ ನಾಯಕನಾಗಿ ಕೊಹ್ಲಿ ಮುಂದುವರಿಕೆ
ಹಲವು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದರೂ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ಸು ಕಂಡಿಲ್ಲ. ಅಲ್ಲದೇ ತಂಡದ ಬ್ರ್ಯಾಂಡ್ ಮೌಲ್ಯವೂ ಕುಸಿದಿದೆ. ಆದರೆ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎಂದು ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಸ್ಪಷ್ಟಪಡಿಸಿದ್ದಾರೆ. 2020ರ ಐಪಿಎಲ್ನಲ್ಲಿ ಕೊಹ್ಲಿಯೇ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡಗಳ ಬ್ರ್ಯಾಂಡ್ ಮೌಲ್ಯ
ತಂಡ 2019ರ ಮೌಲ್ಯ 2018ರ ಮೌಲ್ಯ
ಮುಂಬೈ 809 746
ಚೆನ್ನೈ 732 647
ಕೆಕೆಆರ್ 629 686
ಆರ್‌ಸಿಬಿ 595 647
ಸನ್ರೈಸರ್ಸ್ 483 462
ಡೆಲ್ಲಿ 374 343
ಪಂಜಾಬ್ 358 343
ರಾಜಸ್ಥಾನ 271 284
(ಕೋಟಿ ರುಪಾಯಿಗಳಲ್ಲಿ)