ದೆಹಲಿ(ಮಾ.30): ಬಿಗ್ ಹಿಟ್ಟರ್ ಆ್ಯಂಡ್ರೆ ರಸೆಲ್ ಸ್ಫೋಟಕ ಇನ್ನಿಂಗ್ಸ್ ಹಾಗೂ ನಾಯಕ ದಿನೇಶ್ ಕಾರ್ತಿಕ್ ಹಾಫ್ ಸೆಂಚುರಿ  ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡವನ್ನು ಸಂಕಷ್ಟದಿಂದ ದೂರ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ  ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 185 ರನ್ ಸಿಡಿಸಿದೆ. ಇದೀಗ ತವರಿನ ಡೆಲ್ಲಿ ಕ್ಯಾಪಿಟಲ್ಸ್  ತಂಡ ಗೆಲುವಿಗೆ 186 ರನ್ ಗಳಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್‌‌ಗೆ ಟಾಪ್ ಆರ್ಡರ್ ಬ್ಯಾಟ್ಸ್‌‍ಮನ್‌ಗಳು ಕೈಕೊಟ್ಟರು. ನಿಖಿಲ್ ನಾಯಕ್, ಕ್ರಿಸ್ ಲಿನ್ ಅಬ್ಬರಿಸಲಿಲ್ಲ. ರಾಬಿನ್ ಉತ್ತಪ್ಪ ಹಾಗೂ ನಿತೀಶ್ ರಾಣ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಶುಭ್‌ಮಾನ್ ಗಿಲ್ ಬಂದ ಹಾಗೇ ಪೆವಿಲಿಯನ್ ಸೇರಿದರು. 61 ರನ್ ಗಳಿಸುವಷ್ಟರಲ್ಲೇ ಕೆಕೆಆರ್ 5 ವಿಕೆಟ್ ಕಳೆದುಕೊಂಡಿತು.

ಆ್ಯಂಡ್ರೆ ರಸೆಲ್ ಕ್ರೀಸ್‌ಗೆ ಬಂದ ಮೇಲೆ ಕೆಕೆಆರ್ ಚಿತ್ರಣವೇ ಬದಲಾಯ್ತು. ನಾಯಕ ದಿನೇಶ್ ಕಾರ್ತಿಕ್ ಜೊತೆ ಸೇರಿದ ರಸೆಲ್ ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದರು. ರಸೆಲ್ ಕೇವಲ 28 ಎಸೆತದಲ್ಲಿ 4 ಬೌಂಡರಿ 6 ಸಿಕ್ಸರ್ ಮೂಲಕ 62 ರನ್ ಸಿಡಿಸಿ ಔಟಾದರು. ರಸೆಲ್ ಬೆನ್ನಲ್ಲೇ ಅರ್ಧಶತಕ ಸಿಡಿಸಿದ ದಿನೇಶ್ ಕಾರ್ತಿಕ್ ವಿಕೆಟ್ ಪತನಗೊಂಡಿತು.ಅಂತಿಮವಾಗಿ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 185 ರನ್ ಸಿಡಿಸಿತು.