ಗೆಲುವಿನೊಂದಿಗೆ 2019ರ IPL ಟೂರ್ನಿಗೆ ವಿದಾಯ ಹೇಳಿದ RCB
12ನೇ ಆವೃತ್ತಿಯಲ್ಲಿ ಅಂತಿಮ ಪಂದ್ಯವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಸತತ ಸೋಲು, ಹಿನ್ನಡೆಗಳಿಂದ ನಿರಾಸೆ ಅನುಭವಿಸಿದ್ದ ಅಭಿಮಾನಿಗಳಿಗೆ ಗೆಲುವಿನ ಗಿಫ್ಟ್ ನೀಡಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಬೆಂಗಳೂರು(ಮೇ.04): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನೊಂದಿಗೆ 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ವಿದಾಯ ಹೇಳಿದೆ. ಅಂತಿಮ ಲೀಗ್ ಪಂದ್ಯದಲ್ಲಿ RCB, ಪ್ರವಾಸಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಅಭಿಮಾನಿಗಳಿಗೆ ಗೆಲುವಿನ ಸಿಹಿ ನೀಡಿದೆ. ಆದರೆ RCB ವಿರುದ್ಧ ಮುಗ್ಗರಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ಲೇ ಆಫ್ ಇತರ ತಂಡದ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.
ಗೆಲುವಿಗೆ 176 ರನ್ ಟಾರ್ಗೆಟ್ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಬ್ಬರಿಸೋ ವಿಶ್ವಾಸದಲ್ಲಿ ಕಣಕ್ಕಿಳಿದಿತ್ತು. ಆದರೆ ಆರಂಭದಲ್ಲೇ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಪಾರ್ಥೀವ್ ಪಟೇಲ್ ಶೂನ್ಯ ಸುತ್ತಿದರೆ, ನಾಯಕ ವಿರಾಟ್ ಕೊಹ್ಲಿ 16 ರನ್ ಸಿಡಿಸಿ ಔಟಾದರು. 18 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಕೊಹ್ಲೆ ಬೆನ್ನಲ್ಲೇ, ಎಬಿ ಡಿವಿಲಿಯರ್ಸ್ 1 ರನ್ ಸಿಡಿಸಿ ಔಟಾದರು. ಶಿಮ್ರೊನ್ ಹೆಟ್ಮೆಯರ್ ಹಾಗೂ ಗುರಕೀರತ್ ಸಿಂಗ್ ಜೊತೆಯಾಟ RCB ಅಭಿಮಾನಿಗಳಲ್ಲಿ ಭರವಸೆ ಮೂಡಿಸಿತು. ಆರಂಭಿಕ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ತಂಡದಿಂದ ಹೊರಬಿದ್ದ ಶಿಮ್ರೊನ್ ಕಮ್‌ಬ್ಯಾಕ್ ಪಂದ್ಯದಲ್ಲಿ ಅಬ್ಬರಿಸಿದರು. ಹೆಟ್ಮೆಯರ್ ಹಾಫ್ ಸೆಂಚುರಿ ಸಿಡಿಸಿದರು.
ಗುರುಕೀರತ್ ಸಿಂಗ್ ಕೂಡ ಉತ್ತಮ ಸಾಥ್ ನೀಡಿದರು. ಅರ್ಧಶತಕ ಸಿಡಿಸೋ ಮೂಲಕ ಹೈದರಾಬಾದ್ ತಂಡಕ್ಕೆ ತಲೆನೋವಾದರು. ಹೀಗಾಗಿ RCB ಗೆಲುವಿಗೆ ಅಂತಿಮ 18 ಎಸೆತದಲ್ಲಿ 25 ರನ್ ಬೇಕಿತ್ತು. ಪಂದ್ಯವನ್ನು RCBಯತ್ತ ತಿರುಗಿಸಿದ ಶಿಮ್ರೊನ್ ಹೆಟ್ಮೆಯರ್ 47 ಎಸೆತದಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 75 ರನ್ ಸಿಡಿಸಿ ಔಟಾದರು.
ಶಿಮ್ರೊನ್ ಔಟಾದ ಬೆನ್ನಲ್ಲೇ, 47 ಎಸೆತದಲ್ಲಿ 65 ರನ್ ಸಿಡಿಸಿ ಔಟಾದರು. ವಾಶಿಂಗ್ಟನ್ ಸುಂದರ್ ಬಂದ ಹಾಗೇ ವಾಪಾಸ್ಸಾದರು. ಅಷ್ಟರಲ್ಲೇ RCB ಅಭಿಮಾನಿಗಳ ಆತಂಕ ಹೆಚ್ಚಾಯಿತು. ಆದರೆ ಉಮೇಶ್ ಯಾದವ್ 2 ಬೌಂಡರಿ ಸಿಡಿಸಿದರು. ಈ ಮೂಲಕ ಇನ್ನೂ 4 ಎಸೆತ ಬಾಕಿ ಇರುವಂತೆ RCB 4 ವಿಕೆಟ್ ಗೆಲುವು ಸಾಧಿಸಿತು. ಅಭಿಮಾನಿಗಳು ಹುಚ್ಚೆದ್ದು ಕುಣಿದರು.