ಜೈಪುರ[ಮಾ.25]: 12ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳು ಸೋಮವಾರ ತಮ್ಮ ಅಭಿಯಾನವನ್ನು ಆರಂಭಿಸಲಿವೆ. ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಆಸ್ಪ್ರೇಲಿಯಾದ ನಿಷೇಧಿತ ನಾಯಕ ಸ್ಟೀವ್‌ ಸ್ಮಿತ್‌ ಮೇಲೆ ಎಲ್ಲರ ಕಣ್ಣಿದೆ.

ಕಳೆದ ವರ್ಷ ಐಪಿಎಲ್‌ನಿಂದ ಹೊರಬಿದ್ದಿದ್ದ ಸ್ಮಿತ್‌, ಟೂರ್ನಿಗೆ ವಾಪಸಾಗಲಿದ್ದು ರಾಜಸ್ಥಾನ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಎನಿಸಿದ್ದಾರೆ. ವಿಶ್ವಕಪ್‌ಗೂ ಮುನ್ನ ಲಯ ಕಂಡುಕೊಳ್ಳಲು ಸ್ಮಿತ್‌ ಐಪಿಎಲ್‌ ಟೂರ್ನಿಯನ್ನು ಬಳಸಿಕೊಳ್ಳಲಿದ್ದಾರೆ. ರಾಜಸ್ಥಾನ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದು, ಜೋಸ್‌ ಬಟ್ಲರ್‌ ಹಾಗೂ ಬೆನ್‌ ಸ್ಟೋಕ್ಸ್‌ ತಂಡದ ಪ್ರಮುಖ ತಾರೆಯರಾಗಿದ್ದಾರೆ. ಈ ಇಬ್ಬರು ಏ.25ರ ಬಳಿಕ ಇಂಗ್ಲೆಂಡ್‌ಗೆ ವಾಪಸಾಗಲಿದ್ದು, ಇಬ್ಬರ ಸೇವೆ ಲಭ್ಯವಿರುವಾಗಲೇ ತಂಡ ಆದಷ್ಟುಪಂದ್ಯಗಳನ್ನು ಗೆದ್ದುಕೊಳ್ಳಲು ಎದುರು ನೋಡುತ್ತಿದೆ.

ಜೈದೇವ್‌ ಉನಾದ್ಕತ್‌ ತಂಡದ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ವರುಣ್‌ ಆ್ಯರೋನ್‌ ಧವಲ್‌ ಕುಲ್ಕರ್ಣಿ, ಜೋಫ್ರಾ ಆರ್ಚರ್‌, ಇಶ್‌ ಸೋಧಿ ತಂಡದಲ್ಲಿರುವ ಇತರ ಬೌಲರ್‌ಗಳು.

ಮತ್ತೊಂದೆಡೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿಂಡೀಸ್‌ನ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌, ಕೆ.ಎಲ್‌.ರಾಹುಲ್‌ ಹಾಗೂ ಕರುಣ್‌ ನಾಯರ್‌ ಸಹ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳೆನಿಸಿದ್ದಾರೆ. ಆರ್‌.ಅಶ್ವಿನ್‌ ನೇತೃತ್ವದ ತಂಡಕ್ಕೆ ಮೊಹಮದ್‌ ಶಮಿ, ಆ್ಯಂಡ್ರೂ ಟೈ, ಮುಜೀಬ್‌ ರಂತಹ ಬೌಲರ್‌ಗಳ ಬಲವಿದೆ.

ಒಟ್ಟು ಮುಖಾಮುಖಿ: 17

ರಾಜಸ್ಥಾನ: 10

ಕಿಂಗ್ಸ್‌ ಇಲೆವೆನ್‌: 07

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಅಜಿಂಕ್ಯ ರಹಾನೆ (ನಾಯಕ), ಜೋಸ್‌ ಬಟ್ಲರ್‌, ಸ್ಟೀವ್‌ ಸ್ಮಿತ್‌, ಸಂಜು ಸ್ಯಾಮ್ಸನ್‌, ರಾಹುಲ್‌ ತ್ರಿಪಾಠಿ, ಬೆನ್‌ ಸ್ಟೋಕ್ಸ್‌, ಕೆ.ಗೌತಮ್‌, ಜೋಫ್ರಾ ಆರ್ಚರ್‌, ಶ್ರೇಯಸ್‌ ಗೋಪಾಲ್‌, ಜೈದೇವ್‌ ಉನಾದ್ಕತ್‌, ವರುಣ್‌ ಆ್ಯರೋನ್‌.

ಕಿಂಗ್ಸ್‌ ಇಲೆವೆನ್‌: ಕೆ.ಎಲ್‌ ರಾಹುಲ್‌, ಕ್ರಿಸ್‌ ಗೇಲ್‌, ಮಯಾಂಕ್‌ ಅಗರ್‌ವಾಲ್‌, ಕರುಣ್‌ ನಾಯರ್‌, ಮನ್‌ದೀಪ್‌ ಸಿಂಗ್‌, ಸ್ಯಾಮ್‌ ಕರ್ರನ್‌, ಆರ್‌.ಅಶ್ವಿನ್‌ (ನಾಯಕ), ವರುಣ್‌ ಚಕ್ರವರ್ತಿ, ಮುಜೀಬ್‌, ಮೊಹಮದ್‌ ಶಮಿ, ಆ್ಯಂಡ್ರೂ ಟೈ.

ಪ್ರಾಬಲ್ಯ

ರಾಜಸ್ಥಾನ ರಾಯಲ್ಸ್: ರಹಾನೆ, ಬಟ್ಲರ್‌ ಬ್ಯಾಟಿಂಗ್‌ ಬಲ| ತಂಡಕ್ಕೆ ವಾಪಸಾಗಲಿರುವ ಸ್ಟೀವ್‌ ಸ್ಮಿತ್‌| ಆಲ್ರೌಂಡರ್‌ ಸ್ಟೋಕ್ಸ್‌ ಉಪಸ್ಥಿತಿ

ಕಿಂಗ್ಸ್ ಇಲೆವೆನ್: ಪ್ರಚಂಡ ಲಯದಲ್ಲಿ ಕ್ರಿಸ್‌ ಗೇಲ್‌| ಅತ್ಯುತ್ತಮ ಅಗ್ರ ಕ್ರಮಾಂಕ| ಪರಿಣಾಮಕಾರಿ ಸ್ಪಿನ್‌ ಬೌಲ​ರ್‍ಸ್

ದೌರ್ಬಲ್ಯ

ರಾಜಸ್ಥಾನ ರಾಯಲ್ಸ್: ಅನುಭವಿ ವೇಗದ ಬೌಲರ್‌ಗಳ ಕೊರತೆ| ಸ್ಪಿನ್‌ ವಿಭಾಗದಲ್ಲೂ ತಂಡ ದುರ್ಬಲ| ಅಸ್ಥಿರ ಕೆಳ ಮಧ್ಯಮ ಕ್ರಮಾಂಕ

ಕಿಂಗ್ಸ್ ಇಲೆವೆನ್: ದುರ್ಬಲ ಮಧ್ಯಮ ಕ್ರಮಾಂಕ| ವೇಗಿಗಳು ದುಬಾರಿಯಾಗುವ ಸಾಧ್ಯತೆ| ತಜ್ಞ ವಿಕೆಟ್‌ ಕೀಪರ್‌ ಕೊರತೆ

ಪಿಚ್‌ ರಿಪೋರ್ಟ್‌

ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದ ಪಿಚ್‌ನಲ್ಲಿ ಸಾಮಾನ್ಯವಾಗಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಕಳೆದ ವರ್ಷ ಇಲ್ಲಿ ನಡೆದ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಸರಾಸರಿ 160ರಿಂದ 165 ರನ್‌ ಗಳಿಸಿತ್ತು. 170ಕ್ಕೂ ಹೆಚ್ಚು ಮೊತ್ತ ಕಲೆಹಾಕಿದರೆ ಸುಲಭವಾಗಿ ರಕ್ಷಿಸಿಕೊಳ್ಳಬಹುದು ಎನ್ನಲಾಗಿದೆ.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1