ಚೆನ್ನೈ(ಮಾ.23): ‘ಹಿರಿಯ ನಾಗರಿಕರ ತಂಡ’ ಎಂದು ಕಳೆದ ವರ್ಷ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕಾಲೆಳೆಯಲಾಗಿತ್ತು. ಆದರೆ ಪಂದ್ಯಾವಳಿ ಸಾಗಿದಂತೆ ಎಲ್ಲರ ಕಾಲೆಳೆದ ಎಂ.ಎಸ್‌.ಧೋನಿ ನೇತೃತ್ವದ ತಂಡ, ಐಪಿಎಲ್‌ 11ನೇ ಆವೃತ್ತಿಯ ಚಾಂಪಿಯನ್‌ ಆಗಿತ್ತು. ಇದೀಗ ‘ಹಿರಿಯರ ತಂಡ’ ಟ್ರೋಫಿ ಉಳಿಸಿಕೊಳ್ಳಲು ಕಣಕ್ಕಿಳಿಯುತ್ತಿದೆ. ಶನಿವಾರ 12ನೇ ಆವೃತ್ತಿಯ ಐಪಿಎಲ್‌ಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲೇ ಬದ್ಧವೈರಿಗಳು ಮುಖಾಮುಖಿಯಾಗಲಿವೆ.

ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡ ‘ಈ ಸಲ ಕಪ್‌ ನಮ್ದೆ’ ಎಂದು ಕಳೆದ ವರ್ಷದ ಘೋಷಣೆಯನ್ನೇ ಈ ಸಲವೂ ಕೂಗುತ್ತಿದೆ. ಘಟಾನುಘಟಿಗಳ ದಂಡೇ ಇದ್ದರೂ, ವಿರಾಟ್‌ ಕೊಹ್ಲಿಯ ತಂಡಕ್ಕೆ ಈ ವರೆಗೂ ಟ್ರೋಫಿ ಗೆಲ್ಲಲು ಆಗಿಲ್ಲ. ಬೆಂಗಳೂರು ತಂಡ 12ನೇ ಆವೃತ್ತಿಯ ಮೊದಲ ಪಂದ್ಯವನ್ನೇ ಗೆದ್ದು, ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಲು ಎದುರು ನೋಡುತ್ತಿದೆ.

51 ದಿನ 60 ಪಂದ್ಯ: ಐಪಿಎಲ್ ಕ್ರಿಕೆಟ್ ಹಂಗಾಮಾಕ್ಕೆ ಕೌಂಟ್’ಡೌನ್ ಸ್ಟಾರ್ಟ್

ಆರ್‌ಸಿಬಿ ತಂಡಕ್ಕೆ ಹೋಲಿಸಿದರೆ ಚೆನ್ನೈ ತಂಡ ಸಮತೋಲನ ಹೊಂದಿದೆ. ಶೇನ್‌ ವಾಟ್ಸನ್‌, ಫಾಫ್‌ ಡುಪ್ಲೆಸಿ, ಅಂಬಟಿ ರಾಯುಡು, ಸುರೇಶ್‌ ರೈನಾ, ಎಂ.ಎಸ್‌.ಧೋನಿ ಬ್ಯಾಟಿಂಗ್‌ ಬಲ ತಂಡಕ್ಕಿದೆ. ಕೇದಾರ್‌ ಜಾಧವ್‌, ಡ್ವೇವ್‌ ಬ್ರಾವೋ, ಇಮ್ರಾನ್‌ ತಾಹಿರ್‌, ಮಿಚೆಲ್‌ ಸ್ಯಾಂಟ್ನರ್‌ ಆಲ್ರೌಂಡರ್‌ಗಳ ಪಾತ್ರ ನಿರ್ವಹಿಸಲಿದ್ದಾರೆ. ಹಭರ್ಜನ್‌ ಸಿಂಗ್‌, ರವೀಂದ್ರ ಜಡೇಜಾ ಸ್ಪಿನ್ನರ್‌ಗಳಾಗಿ ಕಾಣಿಸಿಕೊಂಡರೆ, ಮೋಹಿತ್‌ ಶರ್ಮಾ, ಡೇವಿಡ್‌ ವಿಲ್ಲಿ, ಶಾರ್ದೂಲ್‌ ಠಾಕೂರ್‌ ವೇಗದ ಬೌಲಿಂಗ್‌ ಪಡೆಯಲ್ಲಿದ್ದಾರೆ.

ಮತ್ತೊಂದೆಡೆ ಆರ್‌ಸಿಬಿ ಈ ವರ್ಷವೂ ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯ​ರ್ಸ್ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ. ವಿಂಡೀಸ್‌ನ ನವತಾರೆ ಶಿಮ್ರೊನ್‌ ಹೆಟ್ಮೇಯರ್‌ ಮೇಲೆ ನಿರೀಕ್ಷೆ ಇದೆ. ಮುಂಬೈ ಆಲ್ರೌಂಡರ್‌ ಶಿವಂ ದುಬೆ ಸಹ ಎಲ್ಲರ ಕುತೂಹಲ ಕೆರಳಿಸಿದ್ದಾರೆ. ಪಾರ್ಥೀವ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌, ದ.ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್‌, ನ್ಯೂಜಿಲೆಂಡ್‌ನ ಕಾಲಿನ್‌ ಡಿ ಗ್ರಾಂಡ್‌ಹೋಮ್‌, ಇಂಗ್ಲೆಂಡ್‌ನ ಮೋಯಿನ್‌ ಅಲಿ ತಂಡದ ಪ್ರಮುಖ ತಾರೆಯರು. ಯಜುವೇಂದ್ರ ಚಹಲ್‌ ಆರ್‌ಸಿಬಿಯ ಬೌಲಿಂಗ್‌ ಅಸ್ತ್ರ. ಬೌಲಿಂಗ್‌ನಲ್ಲಿ ಆರ್‌ಸಿಬಿ ಸ್ಥಿರತೆ ಕಂಡುಕೊಳ್ಳಬೇಕಿದೆ. ಕಳೆದ ವರ್ಷ ಉಮೇಶ್‌ ಯಾದವ್‌ ಪವರ್‌-ಪ್ಲೇ (ಮೊದಲ 6 ಓವರ್‌)ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದರು. ಹೀಗಾಗಿ ಕೊಹ್ಲಿ, ಯಾದವ್‌ರನ್ನು ಆರಂಭಿಕ ಓವರ್‌ಗಳಲ್ಲಿ ಬಳಸಿಕೊಂಡು ಡೆತ್‌ ಓವರ್‌ಗಳಲ್ಲಿ ಅನುಭವಿ ಟಿಮ್‌ ಸೌಥಿಯನ್ನು ದಾಳಿಗಿಳಿಸಬಹುದು. ಆದರೆ ಮಧ್ಯ ಓವರ್‌ಗಳನ್ನು ನಿಭಾಯಿಸುವವರು ಯಾರು?, 5ನೇ ಬೌಲರ್‌ ಸಮಸ್ಯೆಗೆ ತಂಡ ಪರಿಹಾರ ಕಂಡುಕೊಂಡಿದೆಯೇ ಎನ್ನುವುದಕ್ಕೆ ಉತ್ತರ ಸಿಗಬೇಕಿದೆ.

ಪಾಕಿಸ್ತಾನ ವಿರುದ್ಧ ಯುಎಇನಲ್ಲಿ ಏಕದಿನ ಸರಣಿ ಆಡುತ್ತಿರುವ ಆಸ್ಪ್ರೇಲಿಯಾದ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ನೇಥನ್‌ ಕೌಲ್ಟರ್‌ ನೈಲ್‌ ಮಾ.31ರ ನಂತರ ತಂಡ ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಈ ಇಬ್ಬರ ಅನುಪಸ್ಥಿತಿ ತಂಡವನ್ನು ಕಾಡಲಿದೆ.

ಒಟ್ಟು ಮುಖಾಮುಖಿ: 22

ಆರ್‌ಸಿಬಿ: 07

ಚೆನ್ನೈ: 15

ಸಂಭವನೀಯ ತಂಡ

ಆರ್‌ಸಿಬಿ: ಪಾರ್ಥೀವ್‌ ಪಟೇಲ್‌, ಶಿಮ್ರೊನ್‌ ಹೆಟ್ಮೇಯರ್‌, ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯ​ರ್ಸ್, ಮೋಯಿನ್‌ ಅಲಿ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಟಿಮ್‌ ಸೌಥಿ, ಉಮೇಶ್‌ ಯಾದವ್‌, ಮೊಹಮದ್‌ ಸಿರಾಜ್‌, ಯಜುವೇಂದ್ರ ಚಹಲ್‌.

ಸಿಎಸ್‌ಕೆ: ಶೇನ್‌ ವಾಟನ್ಸ್‌, ಫಾಫ್‌ ಡುಪ್ಲೆಸಿ, ಸುರೇಶ್‌ ರೈನಾ, ಅಂಬಟಿ ರಾಯುಡು, ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ಡ್ವೇನ್‌ ಬ್ರಾವೋ, ರವೀಂದ್ರ ಜಡೇಜಾ, ದೀಪಕ್‌ ಚಾಹರ್‌, ಡೇವಿಡ್‌ ವಿಲ್ಲಿ, ಮೋಹಿತ್‌ ಶರ್ಮಾ.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಪಿಚ್‌ ರಿಪೋರ್ಟ್‌

ಚೆನ್ನೈನ ಚೆಪಾಕ್‌ ಕ್ರೀಡಾಂಗಣದ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಲಿದೆ. ಹೀಗಾಗಿ ಉಭಯ ತಂಡಗಳು ಇಬ್ಬರು ತಜ್ಞ ಸ್ಪಿನ್ನರ್‌ಗಳೊಂದಿಗೆ ಆಡಲಿವೆ. ಇಲ್ಲಿ ಒಟ್ಟು 49 ಐಪಿಎಲ್‌ ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್‌ ಮಾಡಿದ ತಂಡ 30 ಬಾರಿ ಗೆದ್ದಿದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 166 ರನ್‌ಗಳಾಗಿದೆ.

2014ರಿಂದ ಸಿಎಸ್‌ಕೆ ವಿರುದ್ಧ ಗೆದ್ದಿಲ್ಲ ಆರ್‌ಸಿಬಿ!

12ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿ ಒತ್ತಡಕ್ಕೆ ಸಿಲುಕಿದೆ. ಟೂರ್ನಿಯಲ್ಲಿ ಶುಭಾರಂಭ ಮಾಡಬೇಕಿದ್ದರೆ ಆರ್‌ಸಿಬಿ ಕಠಿಣ ಪರಿಶ್ರಮ ವಹಿಸಬೇಕು. ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಕೊನೆ ಬಾರಿಗೆ ಗೆದ್ದಿದ್ದು 2014ರಲ್ಲಿ. 2016, 2017ರಲ್ಲಿ ಚೆನ್ನೈ ತಂಡ ಐಪಿಎಲ್‌ ಆಡಿರಲಿಲ್ಲ. ಆದರೂ ಕಳೆದ ವರ್ಷವೂ ಆರ್‌ಸಿಬಿ, ಸಿಎಸ್‌ಕೆ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಸೋತಿತ್ತು. ಚೆಪಾಕ್‌ ಕ್ರೀಡಾಂಗಣದಲ್ಲಿ ಆಡಿರುವ 7 ಪಂದ್ಯಗಳಲ್ಲಿ ಆರ್‌ಸಿಬಿ 6ರಲ್ಲಿ ಸೋತಿದೆ. 2011ರ ಐಪಿಎಲ್‌ ಫೈನಲ್‌, 2012ರ ಚಾಂಪಿಯನ್ಸ್‌ ಲೀಗ್‌ ಫೈನಲ್‌ನಲ್ಲೂ ಸಿಎಸ್‌ಕೆಗೆ ಆರ್‌ಸಿಬಿ ಶರಣಾಗಿತ್ತು.