Asianet Suvarna News Asianet Suvarna News

ಮುಂದಿನ ವರ್ಷ ಭಾರತದಲ್ಲಿ ಇರಲ್ಲ ಐಪಿಎಲ್ ಟೂರ್ನಿ!


ಭಾರತದ ಅತ್ಯಂತ ಜನಪ್ರೀಯ ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿ ಮುಂದಿನ ವರ್ಷದಲ್ಲಿ ಭಾರತದಲ್ಲಿ ಆಯೋಜನೆಗೊಳ್ಳುವ ಸಾಧ್ಯತೆ ಕಡಿಮೆ. ಇದಕ್ಕೂ ಇತ್ತೀಚೆಗೆ ಭುಗಿಲೆದ್ದ ಬೆಟ್ಟಿಂಗ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. 2019ರ ಲೋಕಸಭಾ ಚುನಾವಣೆಯಿಂದಾಗಿ ಐಪಿಎಲ್ ಟೂರ್ನಿ ಭಾರತದಿಂದ ವರ್ಗಾವಣೆಯಾಗೋ ಸಾಧ್ಯತೆ ಇದೆ.

IPL 2019 likely to be played in Dubai

ಮುಂಬೈ(ಜೂನ್.3): ಐಪಿಎಲ್ ಟೂರ್ನಿ ಕ್ರಿಕೆಟ್ ಪ್ರೇಮಿಗಳನ್ನ ಆವರಿಸಿಕೊಂಡು ಬಿಟ್ಟಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಹಬ್ಬ ಇನ್ನೊಂದಿಲ್ಲ. ಆದರಲ್ಲೂ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ವಾಪಾಸ್ಸಾಗಿರೋದು ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ. 11ನೇ ಆವೃತ್ತಿ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಕಾಯುತ್ತಿರುವ ಅಭಿಮಾನಿಗಳು ಬೇಸರವಾಗೋದು ಖಚಿತ.

2019ರಲ್ಲಿ ನಡೆಯಲಿರುವ 12ನೇ ಆವೃತ್ತಿ ಐಪಿಎಲ್ ಟೂರ್ನಿ ಭಾರತದಲ್ಲಿ ಆಯೋಜನೆಗೊಳ್ಳುವ ಸಾಧ್ಯತೆ ಕಡಿಮೆ. ಕಾರಣ 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಸಂಪೂರ್ಣವಾಗಿ ಟೂರ್ನಿಯನ್ನ ಭಾರತದಲ್ಲಿ ಆಯೋಜಿಸುವುದು ಕಷ್ಟ. ಖಾಸಗಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಐಪಿಎಲ್ ಚೇರ್ಮೆನ್ ರಾಜೀವ್ ಶುಕ್ಲಾ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆಯೋಜನೆ ಕುರಿತು ಸುಳಿವು ನೀಡಿದ್ದಾರೆ. 2019ರ ಐಪಿಎಲ್ ಟೂರ್ನಿ ವೇಳೆ ಲೋಕಸಭಾ ಚುನಾವಣೆ ದಿನಾಂಕ ನಿಗಧಿಯಾದರೆ, ಭದ್ರತೆ ಕಷ್ಟವಾಗಲಿದೆ. ಹೀಗಾದಲ್ಲಿ ಟೂರ್ನಿಯನ್ನ ಭಾರತದಿಂದ ದುಬೈಗೆ ವರ್ಗಾಯಿಸಲಾಗುವುದು ಎಂದು ಶುಕ್ಲಾ ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆ ವೇಳೆ ಐಪಿಎಲ್ ಟೂರ್ನಿಯ ಮೊದಲಾರ್ಧವನ್ನ ದುಬೈನಲ್ಲಿ ಆಯೋಜಿಸಲಾಗಿತ್ತು. ಚುನಾವಣೆಯ ಬಳಿಕ ಟೂರ್ನಿಯನ್ನ ಭಾರತದಲ್ಲಿ ಮುಂದುವರಿಸಲಾಯಿತು. ಇನ್ನು 2009ರಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಡೀ ಟೂರ್ನಿಯನ್ನ ಸೌತ್ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು.  ಇದೀಗ 2019ರ ಲೋಕಸಭಾ ಚುನಾವಣೆಯ ಕಾರಣದಿಂದ ಐಪಿಎಲ್ ಮೂರನೇ ಬಾರಿಗೆ  ಸ್ಥಳಾಂತರವಾಗೋ ಸಾಧ್ಯತೆ ಹೆಚ್ಚಿದೆ.
 

Follow Us:
Download App:
  • android
  • ios