ಮುಂಬೈ(ಮಾ.24): ರಿಷಬ್ ಸ್ಫೋಟಕ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರನ್ ಗೆಲುವು ದಾಖಲಿಸಿದೆ. ಗೆಲುವಿಗೆ 214 ರನ್ ಗುರಿ ಪಡೆದ ಮುಂಬೈ ಇಂಡಿಯನ್ಸ್ 176 ರನ್‌ಗೆ ಆಲೌಟ್ ಆಯ್ತು. ಈ ಮೂಲಕ ಡೆಲ್ಲಿ 37 ರನ್ ಗೆಲುವು ದಾಖಲಿಸಿತು. 

ಗೆಲುವಿಗೆ 214 ರನ್ ಗುರಿ ಪಡೆದ ಮುಂಬೈ ಇಂಡಿಯನ್ಸ್ ಒತ್ತಡದಲ್ಲೇ ಕಣಕ್ಕಿಳಿಯಿತು. ಹೀಗಾಗಿ ರನ್ ಸಿಡಿಯಲಿಲ್ಲ. ನಾಯಕ ರೋಹಿತ್ ಶರ್ಮಾ 14 ರನ್ ಸಿಡಿಸಿ ಔಟಾದರೆ, ಸೂರ್ಯಕುಮಾರ್ ಯಾದವ್ ಕೇವಲ 2 ರನ್‌ಗೆ ಪೆವಿಲಿಯನ್ ಸೇರಿದರು.  ಕ್ವಿಂಟನ್ ಡಿಕಾಕ್ 27 ರನ್ ಕಾಣಿಕೆ ನೀಡಿದರು.

ಯುವರಾಜ್ ಸಿಂಗ್ ತಂಡಕ್ಕೆ ಆಸರೆಯಾದರೆ, ಕೀರನ್ ಪೊಲಾರ್ಡ್ 21 ರನ್‌ಗೆ ಸುಸ್ತಾದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಶೂನ್ಯ ಸುತ್ತಿದರು. ಕ್ರುನಾಲ್ ಪಾಂಡ್ಯ 15 ಎಸೆತದಲ್ಲಿ 32 ರನ್ ಸಿಡಿಸಿ ಔಟಾದರು. ಏಕಾಂಗಿ ಹೋರಾಟ ನೀಡಿದ ಯುವರಾಜ್ 33 ಎಸೆತದಲ್ಲಿ ಅರ್ಧಶತಕ ಪೂರೈಸಿದರು. 

ಮುಂಬೈ ಇಂಡಿಯನ್ಸ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 46 ರನ್ ಬೇಕಿತ್ತು.  ಆದರೆ  ಯುವರಾಜ್ ಸಿಂಗ್ ವಿಕೆಟ್ ಕೈಚೆಲ್ಲಿದರು. ಯುವಿ 53 ರನ್ ಸಿಡಿಸಿ ಔಟಾದರು. ಮಿಚೆಲ್ ಮೆಕ್ಲೆನಾಘನ್ ವಿಕೆಟ್ ಉರುಳುಸುತ್ತದ್ದಂತೆ ಮುಂಬೈ ಸೋಲೊಪ್ಪಿಕೊಂಡಿತು. 37 ರನ್‌ಗಳ ಗೆಲುವು ದಾಖಲಿಸಿದ ಡೆಲ್ಲಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 6 ವಿಕೆಟ್ ನಷ್ಟಕ್ಕೆ 213 ರನ್ ಸಿಡಿಸಿತು. ರಿಷಬ್ ಪಂತ್ 27 ಎಸೆತದಲ್ಲಿ ಅಜೇಯ 78 ರನ್ ಸಿಡಿಸಿದರು. ಶಿಖರ್ ಧವನ್ 43 ಹಾಗೂ ಕಾಲಿನ್ ಇನ್‌ಗ್ರಾಂ 47 ರನ್ ಕಾಣಿಕೆ ನೀಡಿದರು. ಈ ಮೂಲಕ  ಮುಂಬೈಗೆ ಬೃಹತ್ ಟಾರ್ಗೆಟ್ ನೀಡಿತು.