ಚೆನ್ನೈ(ಮಾ.31): ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆರಂಭಿಕ ಆಘಾತದಿಂದ ಚೇತರಿಸಿಕೊಂಡ CSK ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿದೆ. ಇದೀಗ ರಾಜಸ್ಥಾನ ಗೆಲುವಿಗೆ 176 ರನ್ ಗಳಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್, 27 ರನ್‌ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಅಂಬಾಟಿ ರಾಯುಡು 1, ಶೇನ್ ವ್ಯಾಟ್ಸನ್ 13  ಹಾಗೂ ಕೇದಾರ್ ಜಾಧವ್ 8 ರನ್ ಸಿಡಿಸಿ ಔಟಾದರು. ಸಂಕಷ್ಟಕ್ಕೆ ಸಿಲುಕಿದ CSKಗೆ ಸುರೇಶ್ ರೈನಾ ಹಾಗೂ ನಾಯಕ ಎಂ.ಎಸ್.ಧೋನಿ ಆಸರೆಯಾದರು. ಈ ಜೋಡಿ 61 ರನ್ ಜೊತೆಯಾಟ ನೀಡಿದರು.

ತಂಡಕ್ಕೆ ಚೇತರಿಕೆ ನೀಡಿದ ಸುರೇಶ್ ರೈನಾ 36 ರನ್ ಸಿಡಿಸಿ ಔಟಾದರು. ಅದ್ಬುತ ಪ್ರದರ್ಶನ ನೀಡಿದ ಧೋನಿ ಆಕರ್ಷಕ ಅರ್ಧಶತಕ ಸಿಡಿಸಿದರು. ಐಪಿಎಲ್ ಕ್ರಿಕೆಟ್‌ನಲ್ಲಿ ಧೋನಿ  21ನೇ ಅರ್ಧಶತಕ ದಾಖಲಿಸಿದರು. ಧೋನಿ ಡ್ವೇನ್ ಬ್ರಾವೋ ಕೂಡ ಉತ್ತಮ ಸಾಥ್ ನೀಡಿದರು. ಹೊಡಿ ಬಡಿ ಆಟಕ್ಕೆ ಮುಂದಾದ ಬ್ರಾವೋ 16 ಎಸೆತದಲ್ಲಿ 27 ರನ್ ಸಿಡಿಸಿ ನಿರ್ಗಮಿಸಿದರು. 

ರವೀಂದ್ರ ಜಡೇಜಾ ಜೊತೆ ಸೇರಿದ ಧೋನಿ ಅಬ್ಬರಿಸಿದರು. ಸ್ಲಾಗ್ ಓವರ್‌ಗಳಲ್ಲಿ ಧೋನಿ ಸಿಕ್ಸರ್ ಮೂಲಕ CSK ರನ್ ವೇಗ ಹೆಚ್ಚಿಸಿದರು.  ಧೋನಿ ಅಜೇಯ 75 ರನ್ ಸಿಡಿಸಿದರೆ, ಜಡೇಜಾ 8 ರನ್ ಬಾರಿಸಿದರು. ಈ ಮೂಲಕ CSK 5 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿತು.