ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸನ್’ರೈಸರ್ಸ್‌ ಹಾಗೂ 2ನೇ ಸ್ಥಾನ ಪಡೆದ ಚೆನ್ನೈ, ಕ್ವಾಲಿಫೈಯರ್ 1ನಲ್ಲಿ ಆಡುವ ಅವಕಾಶ ಪಡೆದಿವೆ. ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಿದರೆ, ಸೋತ ತಂಡಕ್ಕೆ ಫೈನಲ್’ಗೇರಲು ಮತ್ತೊಂದು ಅವಕಾಶವಿರಲಿದೆ. ಮುಂಬೈನ ಕ್ರಿಕೆಟ್ ಅಭಿಮಾನಿಗಳು ಸ್ಥಳೀಯ ತಂಡ ಪ್ಲೇ-ಆಫ್‌ಗೇರದಿದ್ದರೂ, ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ಅವಕಾಶದಿಂದೇನೂ ವಂಚಿತರಾಗುವುದಿಲ್ಲ. ಈ ಆವೃತ್ತಿಯ ಬಲಿಷ್ಠ ತಂಡಗಳ ನಡುವಿನ ಕಾದಾಟ, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ಮುಂಬೈ[ಮೇ.22]: ಐಪಿಎಲ್ 11ನೇ ಆವೃತ್ತಿ ರೋಚಕ ಘಟ್ಟ ತಲುಪಿದೆ. ಇಲ್ಲಿಂದ ಮುಂದಕ್ಕೆ ತಂಡಗಳು ಸ್ವಲ್ಪ ಎಡವಿದರೂ ಕಪ್ ಗೆಲ್ಲುವ ಅವಕಾಶ ಕೈಜಾರಲಿದೆ. ಪ್ಲೇ-ಆಫ್ ಹಂತ ಇಂದಿನಿಂದ ಆರಂಭಗೊಳ್ಳಲಿದ್ದು, ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್-1 ಪಂದ್ಯದಲ್ಲಿ ಮಾಜಿ ಚಾಂಪಿಯನ್’ಗಳಾದ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿವೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸನ್’ರೈಸರ್ಸ್‌ ಹಾಗೂ 2ನೇ ಸ್ಥಾನ ಪಡೆದ ಚೆನ್ನೈ, ಕ್ವಾಲಿಫೈಯರ್ 1ನಲ್ಲಿ ಆಡುವ ಅವಕಾಶ ಪಡೆದಿವೆ. ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಿದರೆ, ಸೋತ ತಂಡಕ್ಕೆ ಫೈನಲ್’ಗೇರಲು ಮತ್ತೊಂದು ಅವಕಾಶವಿರಲಿದೆ. ಮುಂಬೈನ ಕ್ರಿಕೆಟ್ ಅಭಿಮಾನಿಗಳು ಸ್ಥಳೀಯ ತಂಡ ಪ್ಲೇ-ಆಫ್‌ಗೇರದಿದ್ದರೂ, ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ಅವಕಾಶದಿಂದೇನೂ ವಂಚಿತರಾಗುವುದಿಲ್ಲ. ಈ ಆವೃತ್ತಿಯ ಬಲಿಷ್ಠ ತಂಡಗಳ ನಡುವಿನ ಕಾದಾಟ, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 5 ವಿಕೆಟ್ ಭರ್ಜರಿ ಗೆಲುವು ಸಾಧಿಸಿ, ಪ್ರೀತಿ ಜಿಂಟಾ ತಂಡವನ್ನು ಪ್ಲೇ-ಆಫ್‌ನಿಂದ ಚೆನ್ನೈ ದೂರವಿಟ್ಟರೆ, ಮೇ 10ರಂದು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಗೆಲುವು ಸಾಧಿಸಿ ಪ್ಲೇ-ಆಫ್’ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದ ಸನ್’ರೈಸರ್ಸ್‌, ಆ ಬಳಿಕ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಮಹತ್ವದ ಪಂದ್ಯಕ್ಕೂ ಮುನ್ನ ಆಟಗಾರರ ಲಯದ ಕೊರತೆ ಸನ್‌ರೈಸರ್ಸ್‌ಗೆ ತಲೆಬಿಸಿ ಹೆಚ್ಚಿಸಿದೆ. ಸತತ 6 ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಸನ್‌ರೈಸರ್ಸ್‌ ಓಟಕ್ಕೆ ತಡೆಯಾಗಿದ್ದಿದ್ದು ಇದೇ ಚೆನ್ನೈ ಸೂಪರ್’ಕಿಂಗ್ಸ್. ಮೇ 13ರಂದು ಪುಣೆಯಲ್ಲಿ ನಡೆದಿದ್ದ ಪಂದ್ಯವನ್ನು ಚೆನ್ನೈ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿರುವ ಸನ್‌ರೈಸರ್ಸ್‌ಗೆ, ಚೆನ್ನೈನ ಸಾಮರ್ಥ್ಯವೇನು ಎನ್ನುವುದರ ಅರಿವಿದ್ದು, ಆಟಗಾರರು ಒತ್ತಡಕ್ಕೆ ಸಿಲುಕಿರುವುದು ಸುಳ್ಳಲ್ಲ.
2016ರ ಚಾಂಪಿಯನ್ ಸನ್‌ರೈಸರ್ಸ್‌ ತನ್ನ ನಾಯಕ ಕೇನ್ ವಿಲಿಯಮ್ಸನ್ ಮೇಲೆಯೇ ಹೆಚ್ಚಾಗಿ ಅವಲಂಬಿತಗೊಂಡಿದೆ. ಈ ಆವೃತ್ತಿಯಲ್ಲಿ 60ಕ್ಕೂ ಹೆಚ್ಚು ಸರಾಸರಿಯಲ್ಲಿ ಕೇನ್ 661 ರನ್ ಕಲೆಹಾಕಿದ್ದು, ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ (437 ರನ್)ನೊಂದಿಗೆ ತಂಡಕ್ಕೆ ಭರವಸೆ ಮೂಡಿಸಿದ್ದಾರೆ. ಪ್ರಮುಖವಾಗಿ ರೈಸರ್ಸ್‌ನ ಮಧ್ಯಮ ಕ್ರಮಾಂಕ ಸಿಡಿಯಬೇಕಿದೆ. ಅದರಲ್ಲೂ ಮನೀಶ್ ಪಾಂಡೆ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ರೈಸರ್ಸ್‌ನ ಸದೃಢ ಬೌಲಿಂಗ್ ವಿಭಾಗ ಇತ್ತೀಚಿನ ಕೆಲ ಪಂದ್ಯಗಳಲ್ಲಿ ಮೊನಚು ಕಳೆದುಕೊಂಡಿದೆ. ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ, ವಿದೇಶಿ ಸ್ಪಿನ್ನರ್‌ಗಳಾದ ರಶೀದ್ ಖಾನ್ ಹಾಗೂ ಶಕೀಬ್ ಅಲ್ ಹಸನ್ ಸನ್‌ರೈಸರ್ಸ್‌ನ ಆಧಾರವಾಗಿದ್ದಾರೆ. ಚೆನ್ನೈನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸಲು ಈ ಐವರ ತಂತ್ರಗಾರಿಕೆ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಉತ್ಕೃಷ್ಟ ಲಯದಲ್ಲಿ ಚೆನ್ನೈ: ಅಂಬಟಿ ರಾಯುಡು (586 ರನ್) ಚೆನ್ನೈಗೆ ಈ ಬಾರಿ ಟ್ರಂಪ್ ಕಾರ್ಡ್ ಎನಿಸಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದರೂ, ತಂಡಕ್ಕೆ ಅಗತ್ಯವಿರುವ ರನ್ ಕೊಡುಗೆ ನೀಡುತ್ತಿದ್ದಾರೆ. ಶೇನ್ ವಾಟ್ಸನ್ (438 ರನ್) ಸಹ ಪ್ರಚಂಡ ಲಯದಲ್ಲಿದ್ದು, ಎಂ.ಎಸ್.ಧೋನಿ, ರೈನಾ ಎದುರಾಳಿಯನ್ನು ನಡುಗಿಸಬಲ್ಲರು. ಸ್ಯಾಮ್ ಬಿಲ್ಲಿಂಗ್ಸ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಹರ್ಭಜನ್ ಸಿಂಗ್, ದೀಪಕ್ ಚಾಹರ್ ಹೀಗೆ ಪ್ರತಿಯೊಬ್ಬರೂ ಸಹ ಬ್ಯಾಟ್ ಮಾಡಬಲ್ಲರು. ದ.ಆಫ್ರಿಕಾದ ವೇಗದ ಬೌಲರ್ ಲುಂಗಿಸನಿ ಎನ್‌ಗಿಡಿ ಚೆನ್ನೈನ ಪ್ರಮುಖ ಅಸ್ತ್ರವಾಗಿ ರೂಪುಗೊಂಡಿದ್ದಾರೆ. ಶಾರ್ದೂಲ್, ವಾಟ್ಸನ್, ಬ್ರಾವೋ,ಚಾಹರ್, ಹರ್ಭಜನ್, ಜಡೇಜಾ, ರೈನಾ ಹೀಗೆ ಧೋನಿ ಮುಂದೆ ಹಲವಾರು ಬೌಲಿಂಗ್ ಆಯ್ಕೆಗಳಿವೆ. ಇದೆಲ್ಲದರ ಜತೆಗೆ ಧೋನಿ ತಮ್ಮ ಮೈಂಡ್‌ಗೇಮ್‌ನಿಂದ ಎದುರಾಳಿಯ ಆತ್ಮಬಲವನ್ನು ಕುಗ್ಗಿಸುವುದರಲ್ಲಿ ನಿಸ್ಸೀಮ. 
ಪಂದ್ಯ ರಾತ್ರಿ 8ರ ಬದಲು 7ಕ್ಕೆ ಆರಂಭ
ಲೀಗ್ ಹಂತದ ಬಹುತೇಕ ಪಂದ್ಯಗಳು 11.45-12 ಗಂಟೆಯ ಆಸುಪಾಸಿನಲ್ಲಿ ಮುಕ್ತಾಯಗೊಂಡ ಕಾರಣ, ಕ್ರೀಡಾಂಗಣಕ್ಕೆ ಆಗಮಿಸುವ ಪ್ರೇಕ್ಷಕರಿಗೆ ಮನೆಗೆ ಹಿಂದಿರುಗಲು ಕಷ್ಟವಾಗಲಿದೆ ಎನ್ನುವ ದೃಷ್ಟಿಯಿಂದ ಪ್ಲೇ-ಆಫ್ ಪಂದ್ಯಗಳನ್ನು ರಾತ್ರಿ 8ರ ಬದಲಿಗೆ 7ಕ್ಕೆ ಆರಂಭಿಸಲಾಗುತ್ತಿದೆ. ಜತೆಗೆ ರಾತ್ರಿ 11ರ ಬಳಿಕ ಟೀವಿ ರೇಟಿಂಗ್ ಕುಸಿದಿದ್ದು ಸಹ ಪಂದ್ಯಗಳನ್ನು 1 ಗಂಟೆ ಮುಂಚಿತವಾಗಿ ಆರಂಭಿಸಲು ಕಾರಣ ಎನ್ನಲಾಗಿದೆ.