ರಾಜಸ್ಥಾನದ ಸವಾಲನ್ನು ಮೆಟ್ಟಿ ನಿಲ್ಲುತ್ತಾ ಆರ್’ಸಿಬಿ..? ಗೆಲ್ಲಲು 165 ಟಾರ್ಗೆಟ್

IPL 2018 Tripathi Klaasen Help Rajasthan Post 164 for 5 vs Bangalore
Highlights

ಇಲ್ಲಿನ ಸವಾಯಿ ಮಾನ್’ಸಿಂಗ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಜಸ್ಥಾನ ರಾಯಲ್ಸ್ ಎರಡನೇ ಓವರ್’ನಲ್ಲೇ ವಿಕೆಟ್ ಕಳೆದುಕೊಂಡಿತು. ಆರಂಭಿಕನಾಗಿ ಬಡ್ತಿ ಪಡೆದು ಕಣಕ್ಕಿಳಿದಿದ್ದ ಜೋಪ್ರಾ ಆರ್ಚರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. 

ಜೈಪುರ[ಮೇ.19]: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 164 ರನ್’ಗಳಿಗೆ ನಿಯಂತ್ರಿಸಿದ್ದು, ಈ ಸವಾಲನ್ನು ಮೆಟ್ಟಿನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಇಲ್ಲಿನ ಸವಾಯಿ ಮಾನ್’ಸಿಂಗ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಜಸ್ಥಾನ ರಾಯಲ್ಸ್ ಎರಡನೇ ಓವರ್’ನಲ್ಲೇ ವಿಕೆಟ್ ಕಳೆದುಕೊಂಡಿತು. ಆರಂಭಿಕನಾಗಿ ಬಡ್ತಿ ಪಡೆದು ಕಣಕ್ಕಿಳಿದಿದ್ದ ಜೋಪ್ರಾ ಆರ್ಚರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಉಮೇಶ್ ಯಾದವ್ ಆರ್’ಸಿಬಿಗೆ ಮೊದಲ ಮೇಲುಗೈ ಒದಗಿಸಿಕೊಟ್ಟರು. ಆ ಬಳಿಕ ಎರಡನೇ ವಿಕೆಟ್’ಗೆ ನಾಯಕ ರಹಾನೆ ಹಾಗೂ ರಾಹುಲ್ ತ್ರಿಪಾಠಿ 99 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು. ಈ ಜೋಡಿಯನ್ನು ಬೇರ್ಪಡಿಸಲು ಮತ್ತೆ ಉಮೇಶ್ ಯಾದವ್ ಬರಬೇಕಾಯಿತು. 14ನೇ ಓವರ್’ನಲ್ಲಿ ದಾಳಿಗಿಳಿದ ಉಮೇಶ್ ಯಾದವ್ ಉತ್ತಮವಾಗಿ ಆಡುತ್ತಿದ್ದ ರಹಾನೆ[33] ಹಾಗೂ ಸಂಜು ಸ್ಯಾಮ್ಸನ್[0]ರನ್ನು ಸತತ ಎರಡು ಎಸೆತಗಳಲ್ಲಿ ಬಲಿ ಪಡೆಯುವ ಮೂಲಕ ಮತ್ತೆ ಆರ್’ಸಿಬಿಗೆ ಆಸರೆಯಾದರು. 
ಇನ್ನು ಮಧ್ಯಮ ಕ್ರಮಾಂಕದಲ್ಲಿ ಹೆನ್ರೀಚ್ ಕ್ಲಸೇನ್ ಹಾಗೂ ತ್ರಿಪಾಠಿ ಜೋಡಿ 48 ರನ್’ಗಳ ಜತೆಯಾಟವಾಡುವ ಮೂಲಕ ಆಘಾತದಲ್ಲಿದ್ದ ತಂಡವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಸ್ಫೋಟಕ ಆಟವಾಡಿದ ಕ್ಲಸೇನ್ 21 ಎಸೆತಗಳಲ್ಲಿ 32 ರನ್ ಸಿಡಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನಿರ್ಭಯವಾಗಿ ಬ್ಯಾಟ್ ಬೀಸಿದ ರಾಹುಲ್ ತ್ರಿಪಾಠಿ 58 ಎಸೆತಗಳಲ್ಲಿ ಅಜೇಯ 80 ರನ್ ಚಚ್ಚಿದರು. ಅವರ ಮನಮೋಹಕ ಇನಿಂಗ್ಸ್’ನಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್’ಗಳು ಒಳಗೊಂಡಿದ್ದವು. ಇನ್ನು ಕೊನೆಯ ಓವರ್’ನಲ್ಲಿ ಅಬ್ಬರಿಸಿದ ಕನ್ನಡಿಗ ಕೆ. ಗೌತಮ್ 5 ಎಸೆತಗಳಲ್ಲಿ 2 ಸಿಕ್ಸರ್’ಗಳ ನೆರವಿನಿಂದ 14 ರನ್ ಬಾರಿಸಿದರು.
ಆರ್’ಸಿಬಿ ಪರ 3 ವಿಕೆಟ್ ಪಡೆದ ಉಮೇಶ್ ಯಾದವ್ ಯಶಸ್ವಿ ಬೌಲರ್ ಎನಿಸಿದರೆ, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ರಾಜಸ್ಥಾನ ರಾಯಲ್ಸ್: 164/5
ರಾಹುಲ್ ತ್ರಿಪಾಠಿ: 80*
ಉಮೇಶ್ ಯಾದವ್: 25/3
[* ವಿವರ ಅಪೂರ್ಣ] 

loader