ಇಂದೋರ್[ಮೇ.12]: ಸುನಿಲ್ ನರೈನ್-ದಿನೇಶ್ ಕಾರ್ತಿಕ್ ಆಕರ್ಷಕ ಅರ್ಧಶತಕ ಹಾಗೂ ಬೌಲರ್’ಗಳ ಶಿಸ್ತುಬದ್ದ ದಾಳಿಯ ನೆರವಿನಿಂದ ಪಂಜಾಬ್ ವಿರುದ್ಧ ಕೋಲ್ಕತಾ ನೈಟ್’ರೈಡರ್ಸ್ 31 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ 4ನೇ ಸ್ಥಾನದಲ್ಲಿ ಭದ್ರವಾದರೆ, ಪಂಜಾಬ್ ಮೂರನೇ ಸ್ಥಾನದಲ್ಲೇ ಉಳಿದಿದೆ.
ಕೆಕೆಆರ್ ನೀಡಿದ್ದ 246 ರನ್’ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಗೇಲ್-ರಾಹುಲ್ 5.4 ಓವರ್’ಗಳಲ್ಲಿ 57 ರನ್ ಕಲೆ ಹಾಕಿತು. ಆದರೆ ಆರನೇ ಓವರ್ ಬೌಲಿಂಗ್ ಮಾಡಿದ ರಸೆಲ್ ಒಂದೇ ಓವರ್’ನಲ್ಲಿ ಗೇಲ್ ಹಾಗೂ ಮಯಾಂಕ್ ಅಗರ್’ವಾಲ್ ಅವರನ್ನು ಬಲಿ ಪಡೆಯುವ ಮೂಲಕ ಪಂಜಾಬ್’ಗೆ ಶಾಕ್ ನೀಡಿದರು. ಗೇಲ್ 21 ರನ್ ಬಾರಿಸಿದರೆ, ಅಗರ್’ವಾಲ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಕರುಣ್ ನಾಯರ್ ಕೂಡಾ[3] ರಸೆಲ್’ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆಗ ಪಂಜಾಬ್ 8 ಓವರ್’ಗಳಲ್ಲಿ 3 ವಿಕೆಟ್ ಕಳೆದುಕೊಂಡು 79 ರನ್ ಬಾರಿಸಿತ್ತು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಹುಲ್ 29 ಎಸೆತಗಳಲ್ಲಿ 66 ರನ್ ಚಚ್ಚಿದರು. ಮಧ್ಯಮ ಕ್ರಮಾಂಕದಲ್ಲಿ ಫಿಂಚ್ 34, ಅಶ್ವಿನ್ 45 ಸಿಡಿಸಿದರಾದರೂ ಪಂದ್ಯವನ್ನು ಗೆಲುವಿನ ದಡ ಸೇರಿಸಲು ಯಶಸ್ವಿಯಾಗಲಿಲ್ಲ.
ಕೆಕೆಆರ್ ಪರ ರಸೆಲ್ 3 ವಿಕೆಟ್ ಪಡೆದರೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ 2 ಹಾಗೂ ಸುನಿಲ್ ನರೈನ್, ಕುಲ್ದೀಪ್ ಯಾದವ್ ಹಾಗೂ ಜಾವೋನ್ ಸೀರ್ಲೆಸ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಸುನಿಲ್ ನರೈನ್[75] ಆಕರ್ಷಕ ಬ್ಯಾಟಿಂಗ್ ನೆರವಿನಿಂದ 245 ರನ್ ಕಲೆಹಾಕಿತ್ತು.
ಸಂಕ್ಷಿಪ್ತ ಸ್ಕೋರ್:
KKR: 245/6
ಸುನಿಲ್ ನರೈನ್: 75
ಆ್ಯಂಡ್ರೋ ಟೈ: 41/4
KXIP: 214/8
ಕೆ.ಎಲ್ ರಾಹುಲ್: 66
ರಸೆಲ್: 41/3