ಬೆಂಗಳೂರು[ಏ.30]: ಫಿಟ್‌’ನೆಸ್‌'ಗೆ ಮೊದಲ ಆದ್ಯತೆ ನೀಡುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೇವಲ 8.90 ಸೆಕೆಂಡ್‌'ಗಳಲ್ಲಿ 3 ರನ್ ಓಡಿ, ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ತಾವು ರಾಯಭಾರಿಯಾಗಿರುವ ಕ್ರೀಡಾಪರಿಕರಗಳ ಬ್ರ್ಯಾಂಡ್‌'ವೊಂದು ನಡೆಸಿರುವ ವಿಶೇಷ ಅಭಿಯಾನದ ಅಂಗವಾಗಿ, ಕೊಹ್ಲಿ ಈ ಸವಾಲು ಸ್ವೀಕರಿಸಿದ್ದಾರೆ. ಜತೆಗೆ ತಮ್ಮ ದಾಖಲೆಯನ್ನು ಸಾಧ್ಯವಾದರೆ ಮುರಿಯಿರಿ ಎಂದು ಕ್ರಿಕೆಟಿಗರಿಗೆ ಟ್ವೀಟರ್‌'ನಲ್ಲಿ ಸವಾಲೆಸೆದಿದ್ದಾರೆ.

ಪ್ಯಾಡ್ ಕಟ್ಟಿ, ಕೈಯಲ್ಲಿ ಬ್ಯಾಟ್ ಹಿಡಿದು 22 ಗಜ (20.11 ಮೀಟರ್)ದ ಪಿಚ್‌'ನಲ್ಲಿ ಕೊಹ್ಲಿ ಓಡಿದ್ದಾರೆ. 20 ಮೀಟರ್‌'ಗಳಂತೆ 3 ರನ್ ಮುಕ್ತಾಯಗೊಳಿಸಲು ಕೊಹ್ಲಿ 60 ಮೀಟರ್ ದೂರ ಕ್ರಮಿಸಿದ್ದಾರೆ. ಒಳಾಂಗಣ ಅಥ್ಲೆಟಿಕ್ಸ್
ನಲ್ಲಿ ಅತಿ ವೇಗದ 60 ಮೀ. ಓಟದ ವಿಶ್ವ ದಾಖಲೆ ಅಮೆರಿಕದ ಕ್ರಿಶ್ಚಿಯನ್ ಕೋಲ್ಮನ್ ಹೆಸರಿನಲ್ಲಿದೆ. ಕೋಲ್ಮನ್ 6.34 ಸೆಕೆಂಡ್‌'ಗಳಲ್ಲಿ 60 ಮೀ. ಓಡಿದ್ದರು. ಟ್ರ್ಯಾಕ್‌'ನಲ್ಲಿ ನೇರವಾಗಿ ಓಡಲು ೬.೩೪ ಸೆಕೆಂಡ್‌ಗಳನ್ನು ತೆಗೆದುಕೊಂಡಿದ್ದಕ್ಕೆ ಹೋಲಿಸಿದರೆ, ಕೊಹ್ಲಿ ಕ್ರಿಕೆಟ್ ಪಿಚ್‌'ನಲ್ಲಿ ಪ್ಯಾಡ್, ಬ್ಯಾಟ್ ಸಹಿತ ಕೇವಲ 8.90 ಸೆಕೆಂಡ್'ನಲ್ಲಿ ಓಟ ಪೂರ್ಣಗೊಳಿಸಿರುವುದು ಅಚ್ಚರಿಯೇ ಸರಿ.

ವಿರಾಟ್ ಕೊಹ್ಲಿ ನೇತೃತ್ವದ ಆರ್’ಸಿಬಿ ಸೋಲಿನ ಮೇಲೆ ಸೋಲು ಕಾಣುತ್ತಿದ್ದು ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಸೋತಿದ್ದು, ಕೇವಲ 2 ಪಂದ್ಯಗಳಲ್ಲಷ್ಟೇ ಗೆಲುವಿನ ನಗೆ ಬೀರಿದೆ.