ಜೈಪುರ[ಏ.12]: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ತಂಡ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಮಿಚೆಲ್ ಸ್ಯಾಂಟ್ನರ್ ಚೆನ್ನೈಗೆ ಗೆಲುವಿನ ಉಡುಗೊರೆ ನೀಡಿದರು. ಈ ಗೆಲುವಿನೊಂದಿಗೆ ಧೋನಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ಟೂರ್ನಿಯಲ್ಲಿ 2ನೇ ಗೆಲುವಿನ ಕನವರಿಕೆಯಲ್ಲಿದ್ದ ರಹಾನೆ ಪಡೆಗೆ ಮತ್ತೆ ನಿರಾಸೆ ಎದುರಾಗಿದೆ.

ರಾಜಸ್ಥಾನ ನೀಡಿದ್ದ 152 ರನ್’ಗಳ ಗುರಿ ಬೆನ್ನತ್ತಿದ ಚೆನ್ನೈ ಆರಂಭದಲ್ಲೇ ವ್ಯಾಟ್ಸನ್[0], ಡುಪ್ಲೆಸಿಸ್[7], ರೈನಾ[4] ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 24 ರನ್’ಗಳಾಗುವಷ್ಟರಲ್ಲಿ ಜಾಧವ್[1] ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈ ತಂಡಕ್ಕೆ ಅಂಬಟಿ ರಾಯುಡು[57] ಹಾಗೂ ನಾಯಕ ಧೋನಿ[58] ಆಸರೆಯಾದರು. 5ನೇ ವಿಕೆಟ್’ಗೆ ಈ ಜೋಡಿ 95 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

ರೋಚಕತೆ ಹೆಚ್ಚಿಸಿದ ಕೊನೆಯ ಓವರ್: ಕೊನೆಯ ಓವರ್’ನಲ್ಲಿ ಚೆನ್ನೈ ಗೆಲ್ಲಲು 18 ರನ್’ಗಳ ಅವಶ್ಯಕತೆಯಿತ್ತು. ಬೆನ್ ಸ್ಟೋಕ್ಸ್ ಮೊದಲ ಎಸೆತದಲ್ಲೇ ಜಡೇಜಾ ಸಿಕ್ಸರ್ ಸಿಡಿಸಿ ಒತ್ತಡವನ್ನು ಕಡಿಮೆ ಮಾಡಿದರು. 2 ನೇ ಎಸೆತ ನೋಬಾಲ್ ಹಾಕಿದ್ದರಿಂದ ಚೆನ್ನೈ ಎರಡು ರನ್ ದೋಚಿತು. ಮರು ಎಸೆತದಲ್ಲಿ ಧೋನಿ ಮತ್ತೆರಡು ರನ್ ಕಲೆಹಾಕಿದರು. ಆದರೆ ಮೂರನೇ ಎಸೆತದಲ್ಲಿ ಧೋನಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 4ನೇ ಹಾಗೂ 5ನೇ ಎಸೆತದಲ್ಲಿ ತಲಾ 2 ರನ್ ಗಳಿಸಿದ ಸ್ಯಾಟ್ನರ್, ಕೊನೆಯ ಎಸೆತದಲ್ಲಿ 4 ರನ್’ಗಳ ಬೇಕಾಗಿತ್ತು. ಈ ವೇಳೆ ಸ್ಟೋಕ್ಸ್ ಮತ್ತೊಂದು ವೈಡ್ ಹಾಕಿದರು. ಆರನೇ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಚೆನ್ನೈಗೆ ರೋಚಕ ಜಯ ತಂದಿತ್ತರು.

ಇದಕ್ಕೂ ಮೊದಲು ರಾಜಸ್ಥಾನ ತಂಡವು ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 151 ರನ್ ಬಾರಿಸಿತ್ತು. ತವರಿನಲ್ಲಿ ಗೆಲ್ಲುವ ಉತ್ಸಾಹದಲ್ಲಿದ್ದ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನದ ಕನಸಿಗೆ ಸ್ಯಾಂಟ್ನರ್ ತಣ್ಣೀರೆರಚಿದರು.

ಸಂಕ್ಷಿಪ್ತ ಸ್ಕೋರ್:
ರಾಜಸ್ಥಾನ ರಾಯಲ್ಸ್: 151/7
ಬೆನ್ ಸ್ಟೋಕ್ಸ್: 28
ಜಡೇಜಾ: 20/2
ಚೆನ್ನೈ ಸೂಪರ್’ಕಿಂಗ್ಸ್: 155/6
ಧೋನಿ: 58
ಸ್ಟೋಕ್ಸ್: 39/2