ಮೊಹಾಲಿ[ಏ.13.]: ಸತತ 6 ಸೋಲುಗಳಿಂದ ಉಸಿರುಗಟ್ಟಿದ ಸ್ಥಿತಿಯಲ್ಲಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡವನ್ನು ಎದುರಿಸಲಿದ್ದು, ವಿರಾಟ್‌ ಕೊಹ್ಲಿ ಪಡೆಗಿದು ಮಾಡು ಇಲ್ಲವೇ ಮಡಿ ಪಂದ್ಯವೆನಿಸಿದೆ. ಬಾಕಿ ಇರುವ ಎಂಟೂ ಪಂದ್ಯಗಳಲ್ಲಿ ಗೆದ್ದರೂ ಆರ್‌ಸಿಬಿ ಪ್ಲೇ-ಆಫ್‌ಗೇರುವುದು ಕಷ್ಟ. ಒಂದೊಮ್ಮೆ ಈ ಪಂದ್ಯದಲ್ಲಿ ಸೋತರೆ ಆರ್‌ಸಿಬಿ, ಪ್ಲೇ-ಆಫ್‌ ಓಟದಿಂದ ಅಧಿಕೃತವಾಗಿ ಹೊರಬೀಳಲಿದೆ.

5 ದಿನಗಳ ವಿಶ್ರಾಂತಿ ಬಳಿಕ ಕಣಕ್ಕಿಳಿಯಲಿರುವ ಆರ್‌ಸಿಬಿ, ಹೊಸ ಆರಂಭ ಕಂಡುಕೊಳ್ಳಲು ಕಾತರಿಸುತ್ತಿದೆ. ತಂಡದ ಪ್ರತಿ ಯೋಜನೆಯೂ ವಿಫಲವಾಗುತ್ತಿದ್ದು, ‘ಗೆಲ್ಲಲು ದಾರಿ ಯಾವುದಯ್ಯ’ ಎನ್ನುವಂತಾಗಿದೆ? ನಾಯಕ ಕೊಹ್ಲಿ ಪರಿಸ್ಥಿತಿ. ವಿಶ್ವಕಪ್‌ಗೂ ಮುನ್ನ ವಿರಾಟ್‌ ಗೆಲುವಿನ ಸೂತ್ರ ಕಂಡುಹಿಡಿದುಕೊಳ್ಳಲು ಪ್ರಯತ್ನಿಸಲಿದ್ದಾರೆ. ಆರ್‌ಸಿಬಿ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಮೂರೂ ವಿಭಾಗಗಳಲ್ಲಿ ವೈಫಲ್ಯ ಕಾಣುತ್ತಿದೆ. ಈ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.

ಗೆಲುವಿಗಾಗಿ RCB ಹೊಸ ತಂತ್ರ- ತಂಡ ಸೇರಿಕೊಂಡ ಸ್ಟಾರ್ ಕ್ರಿಕೆಟಿಗ!

ಪಂಜಾಬ್‌ಗೆ ಸ್ಥಿರತೆ ಕೊರತೆ: ಮತ್ತೊಂದೆಡೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಅತ್ಯುತ್ತಮ ತಂಡ ಹೊಂದಿದ್ದರೂ, ಸ್ಥಿರತೆ ಸಮಸ್ಯೆ ಕಾಡುತ್ತಿದೆ. ಕಳೆದ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ ಶತಕ ಬಾರಿಸಿದರೂ, ಮುಂಬೈ ವಿರುದ್ಧ ಗೆಲ್ಲಲು ಪಂಜಾಬ್‌ ವಿಫಲವಾಗಿತ್ತು. ಬೌಲರ್‌ಗಳು ಪದೇ ಪದೇ ವೈಫಲ್ಯ ಕಾಣುತ್ತಿದ್ದಾರೆ. ಮಧ್ಯಮ ಕ್ರಮಾಂಕ ದಿಢೀರ್‌ ಕುಸಿತ ಕಾಣುವುದು ಸಹ ಪಂಜಾಬ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 7 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿರುವ ಪಂಜಾಬ್‌, ಆರ್‌ಸಿಬಿ ವಿರುದ್ಧ ಗೆದ್ದು ಪ್ಲೇ-ಆಫ್‌ ಪೈಪೋಟಿಯಲ್ಲಿ ಉಳಿದುಕೊಳ್ಳಲು ಎದುರು ನೋಡುತ್ತಿದೆ.

ಪಿಚ್‌ ರಿಪೋರ್ಟ್‌

ಮೊಹಾಲಿ ಪಿಚ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಇಲ್ಲಿ ಮೊದಲು ಬ್ಯಾಟ್‌ ಮಾಡುವ ತಂಡ 180ಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ. ಈ ಆವೃತ್ತಿಯಲ್ಲಿ ನಡೆದಿರುವ ಮೂರೂ ಪಂದ್ಯಗಳಲ್ಲಿ ವೇಗಿಗಳು ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ.

ಒಟ್ಟು ಮುಖಾಮುಖಿ: 22

ಆರ್‌ಸಿಬಿ: 10

ಪಂಜಾಬ್‌: 12

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಪಾರ್ಥೀವ್‌ ಪಟೇಲ್‌, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿವಿಲಿಯ​ರ್ಸ್‌, ಮಾರ್ಕಸ್‌ ಸ್ಟೋಯ್ನಿಸ್‌, ಮೋಯಿನ್‌ ಅಲಿ, ಅಕ್ಷದೀಪ್‌ ನಾಥ್‌, ಪವನ್‌ ನೇಗಿ, ಟಿಮ್‌ ಸೌಥಿ, ಮೊಹಮದ್‌ ಸಿರಾಜ್‌, ಯಜುವೇಂದ್ರ ಚಹಲ್‌, ನವ್‌ದೀಪ್‌ ಸೈನಿ.

ಪಂಜಾಬ್‌: ಕೆ.ಎಲ್‌.ರಾಹುಲ್‌, ಕ್ರಿಸ್‌ ಗೇಲ್‌, ಡೇವಿಡ್‌ ಮಿಲ್ಲರ್‌, ಕರುಣ್‌ ನಾಯರ್‌, ಮನ್‌ದೀಪ್‌ ಸಿಂಗ್‌, ಸರ್ಫರಾಜ್‌ ಖಾನ್‌, ಸ್ಯಾಮ್‌ ಕರ್ರನ್‌, ಹಾರ್ಡಸ್‌ ವಿಲಿಯೊನ್‌, ಆರ್‌.ಅಶ್ವಿನ್‌ (ನಾಯಕ), ಮೊಹಮದ್‌ ಶಮಿ, ಅಂಕಿತ್‌ ರಜಪೂತ್‌.

ಸ್ಥಳ: ಮೊಹಾಲಿ 
ಪಂದ್ಯ ಆರಂಭ: ರಾತ್ರಿ 8ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.