ಚೆನ್ನೈ(ಮೇ.17): ಐಸಿಸಿ ಏಕದಿನ ವಿಶ್ವಕಪ್ ಬಳಿಕ ಎಂ.ಎಸ್.ಧೋನಿ ನಿವೃತ್ತಿ ಪಡೆಯಲಿದ್ದಾರೆ. ಇದು ಅವರ ಕೊನೆ ಐಪಿಎಲ್ ಆಗಿತ್ತು ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಆದರೆ ಧೋನಿ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್'ನ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ (ಸಿಇಒ) ಕಾಶಿ ವಿಶ್ವನಾಥನ್ ಸಿಹಿ ಸುದ್ದಿ ನೀಡಿದ್ದಾರೆ.

ಧೋನಿ 2020ರ ಐಪಿಎಲ್'ನಲ್ಲಿ ಚೆನ್ನೈ ತಂಡದಲ್ಲಿ ಆಡಲಿದ್ದಾರೆ ಎಂದು ಅವರು ಮಾಧ್ಯಮವೊಂದಕ್ಕೆ ನೀಡುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘ಧೋನಿ ಮುಂದಿನ ವರ್ಷ ಐಪಿಎಲ್'ನಲ್ಲಿ ಆಡಲಿದ್ದಾರೆ ಎನ್ನುವ ನಂಬಿಕೆ ನನಗಿದೆ. ಕಳೆದ 2 ವರ್ಷದಿಂದ ಅವರ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಹಲವರು ಅವರನ್ನು ಟೀಕಿಸುತ್ತಿದ್ದಾರೆ. ಆದರೆ ಅಂಕಿ-ಅಂಶಗಳನ್ನು ನೋಡಿದಾಗ ಧೋನಿ ಆಟ ಉತ್ತಮವಾಗಿದೆ. 2018ರಲ್ಲಿ ಅತ್ಯುತ್ತಮ ಪ್ರದರ್ಶನ ತೋದಿದ್ದ ಧೋನಿ, ಈ ವರ್ಷವೂ ಮಿಂಚಿನ ಆಟವಾಡಿದರು. ವಿಶ್ವಕಪ್'ನಲ್ಲಿ ಅವರ ಪಾತ್ರ ಪಮುಖವೆನಿಸಲಿದೆ. ಧೋನಿ ಬಗ್ಗೆ ನನಗೆ ಗೊತ್ತಿದೆ. ಅವರು ಮುಂದಿನ ವರ್ಷ ಖಂಡಿತವಾಗಿಯೂ ಐಪಿಎಲ್'ನಲ್ಲಿ ಆಡಲಿದ್ದಾರೆ’ ಎಂದು ವಿಶ್ವನಾಥನ್ ಹೇಳಿದ್ದಾರೆ.

ಎರಡು ವರ್ಷಗಳ ಬಳಿಕ ಐಪಿಎಲ್'ಗೆ ಕಮ್'ಬ್ಯಾಕ್ ಮಾಡಿದ್ದ ಧೋನಿ ನೇತೃತ್ವದ ಚೆನ್ನೈ ಸೂಪರ್'ಕಿಂಗ್ಸ್ ತಂಡವು 2018ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 12ನೇ ಆವೃತ್ತಿಯ ಫೈನಲ್'ನಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.