ಚೆನ್ನೈ[ಮಾ.31]: ಐಪಿಎಲ್‌ 12ನೇ ಆವೃತ್ತಿ ಕಳಪೆ ಆರಂಭ ಪಡೆದುಕೊಳ್ಳಲು ಕಾರಣವಾಗಿದ್ದ ಇಲ್ಲಿನ ಚೆಪಾಕ್‌ ಕ್ರೀಡಾಂಗಣದ ಪಿಚ್‌, ಭಾನುವಾರ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಪಿಚ್‌ ಹೇಗೆ ವರ್ತಿಸಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. 

ಸತತ 2 ಗೆಲುವುಗಳನ್ನು ಸಾಧಿಸಿರುವ ಹಾಲಿ ಚಾಂಪಿಯನ್‌ ಚೆನ್ನೈ, ಹ್ಯಾಟ್ರಿಕ್‌ ಗೆಲುವಿನ ಮೇಲೆ ಕಣ್ಣಿಟ್ಟರೆ, ಉತ್ತಮ ಪ್ರದರ್ಶನದ ಹೊರತಾಗಿಯೂ ಎರಡೂ ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ರಾಜಸ್ಥಾನ, ಗೆಲುವಿನ ಖಾತೆ ತೆರೆಯಲು ಕಾತರಿಸುತ್ತಿದೆ. 

ಚೆನ್ನೈ ಎರಡೂ ಪಂದ್ಯಗಳಲ್ಲಿ ಕೇವಲ ಮೂವರು ವಿದೇಶಿ ಆಟಗಾರರನ್ನು ಮಾತ್ರ ಆಡಿಸಿದ್ದು, ಈ ಪಂದ್ಯದಲ್ಲೂ ಅದೇ ತಂತ್ರದೊಂದಿಗೆ ಮುಂದುವರಿಯುವ ನಿರೀಕ್ಷೆ ಇದೆ. ರಾಜಸ್ಥಾನ ತಂಡದಲ್ಲೂ ಬದಲಾವಣೆ ಸಾಧ್ಯತೆ ಕಡಿಮೆ.

ಒಟ್ಟು ಮುಖಾಮುಖಿ: 19

ಚೆನ್ನೈ: 12

ರಾಜಸ್ಥಾನ: 07

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಶೇನ್‌ ವಾಟನ್ಸ್‌, ಅಂಬಟಿ ರಾಯುಡು, ಸುರೇಶ್‌ ರೈನಾ, ಎಂ.ಎಸ್‌.ಧೋನಿ(ನಾಯಕ), ಕೇದಾರ್‌ ಜಾಧವ್‌, ಡ್ವೇನ್‌ ಬ್ರಾವೋ, ರವೀಂದ್ರ ಜಡೇಜಾ, ಹರ್ಭಜನ್‌ ಸಿಂಗ್‌, ದೀಪಕ್‌ ಚಾಹರ್‌, ಶಾರ್ದೂಲ್‌ ಠಾಕೂರ್‌, ಇಮ್ರಾನ್‌ ತಾಹಿರ್‌.

ರಾಜಸ್ಥಾನ: ಅಜಿಂಕ್ಯ ರಹಾನೆ (ನಾಯಕ), ಜೋಸ್‌ ಬಟ್ಲರ್‌, ಸ್ಟೀವ್‌ ಸ್ಮಿತ್‌, ಸಂಜು ಸ್ಯಾಮ್ಸನ್‌, ಬೆನ್‌ ಸ್ಟೋಕ್ಸ್‌, ರಾಹುಲ್‌ ತ್ರಿಪಾಠಿ, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಜೋಫ್ರಾ ಆರ್ಚರ್‌, ಜಯದೇವ್‌ ಉನಾದ್ಕತ್‌, ಧವಲ್‌ ಕುಲ್ಕರ್ಣಿ.

ಸ್ಥಳ: ಚೆನ್ನೈ, ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ 1

ಪಿಚ್‌ ರಿಪೋರ್ಟ್‌

ಮೊದಲ ಪಂದ್ಯದಲ್ಲಿ ಚೆಪಾಕ್‌ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಇನ್ನಿಲ್ಲದ ಸಮಸ್ಯೆ ತಂದೊಡ್ಡಿತ್ತು. ಸಾಮಾನ್ಯವಾಗಿ ಚೆಪಾಕ್‌ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದ್ದು, ಈ ಪಂದ್ಯದಲ್ಲೂ ಸ್ಪಿನ್ನರ್‌ಗಳೇ ಪಂದ್ಯದ ಫಲಿತಾಂಶ ನಿರ್ಧರಿಸಲಿದ್ದಾರೆ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡುವ ನಿರೀಕ್ಷೆ ಇದೆ.