ಬೆಂಗಳೂರು (ಏ. ೦2): ಕ್ರಿಕೆಟ್ ಶ್ರೀಮಂತರ ಕ್ರೀಡೆ ಆದರೇನಂತೆ, ಗ್ರಾಮೀಣಾ  ಪ್ರತಿಭೆಗಳು ಆಡಬಾರದು ಅಂತಾ ಏನಿಲ್ಲವಲ್ಲ. ಹಳ್ಳಿಗಾಡಿನ ಪ್ರತಿಭೆಗಳಿಗಾಗಿಯೇ ಉತ್ತರ ಕರ್ನಾ ಟಕದ ಹೃದಯಭಾಗ  ಹುಬ್ಬಳ್ಳಿಯಲ್ಲಿ ಸುಸಜ್ಜಿತ  ಕ್ರಿಕೆಟ್ ಅಕಾಡೆಮಿಯೊಂದು ತಲೆ ಎತ್ತಿದೆ.

ಮಾಜಿ ರಣಜಿ ಆಟಗಾರ,  ಕರ್ನಾಟಕ ತಂಡದ ಮಾಜಿ ಸಹಾಯಕ ಕೋಚ್ ಸೋಮಶೇಖರ್ ಶಿರಗುಪ್ಪಿ ಮತ್ತವರ ಸ್ನೇಹಿತರು ಸೇರಿ ತೇಜಲ್  ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯನ್ನು ತೆರೆದಿದ್ದಾರೆ. ಗ್ರಾಮೀಣ ಪ್ರತಿಭೆಗಳು ಕ್ರಿಕೆಟ್ ಆಟವನ್ನು ಅರಸಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬರುವ ಧಾವಂತ ಇನ್ನು  ಮುಂದೆ ಬರೋದಿಲ್ಲ. ಏಕೆಂದರೆ ಶಿರಗುಪ್ಪಿ ಅವರ  ಕ್ರಿಕೆಟ್ ಅಕಾಡೆಮಿ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದೆ. ಉತ್ತರ ಕರ್ನಾಟಕದಲ್ಲಿ ಮೊದಲ ಆಸ್ಟ್ರೋಟರ್ಫ್ ಒಳಗೊಂಡ ಅಕಾಡೆಮಿ ಇದಾಗಿದೆ. ಇಲ್ಲಿನ  ಉದಯೋನ್ಮುಖ  ಕ್ರಿಕೆಟ್ ಆಟಗಾರರ ಪ್ರತಿಭೆಯನ್ನು ಪೋಷಿಸುವ ದೃಷ್ಟಿಯಿಂದ ಅಕಾಡೆಮಿ  ಸ್ಥಾಪಿಸಿರುವುದಾಗಿ ‘ಕನ್ನಡಪ್ರಭ’ಕ್ಕೆ ತಿಳಿಸಿದ ಸೋಮ ಶೇಖರ್, ಮುಂದಿನ ದಿನಗಳಲ್ಲಿ ಈ ಭಾಗದ ಹೆಚ್ಚು ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರ ತಂಡದಲ್ಲಿ ನೋಡುವ
ಆಸೆಯಿಟ್ಟುಕೊಂಡಿದ್ದಾರೆ.

15 ಸಾವಿರ ಚದರ ಅಡಿ ವಿಸ್ತೀರ್ಣ: ಹುಬ್ಬಳ್ಳಿ ವಿಮಾನ  ನಿಲ್ದಾಣ ರಸ್ತೆಯ ಇನ್‌ಫೋಸಿಸ್ ಪಕ್ಕದಲ್ಲಿ ಈ ಅಕಾಡೆಮಿಯನ್ನು ತೆರೆಯಲಾಗಿದೆ. 5  ವರ್ಷಗಳ ಕಾಲ ಈ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ಖರೀದಿಸಿ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. 15 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಈ  ಅಕಾಡೆಮಿಯಲ್ಲಿ 8 ಲೈನ್ ಪಿಚ್‌ಗಳನ್ನು ಮಾಡಲಾಗಿದೆ. ಅಕಾಡೆಮಿಯಲ್ಲಿ ೨ ಬೌಲಿಂಗ್ ಮಷಿನ್ ಇರಿಸಲಾಗಿದೆ. ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುವ ಶಿಬಿರಾರ್ಥಿಗಳು, ಬೌಲರ್ ಇಲ್ಲದೆಯೂ ಸುಲಭವಾಗಿ ಅಭ್ಯಾಸ ನಡೆಸಬಹುದಾಗಿದೆ.