ಬೆಂಗಳೂರು[ಮಾ.31]: 12ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಆಟಗಾರರ ಹರಾಜಿನಲ್ಲಿ 16 ವರ್ಷದ ಪ್ರಯಾಸ್ ರೇ ಬರ್ಮಾನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ 1.5 ಕೋಟಿ ನೀಡಿ ಖರೀದಿಸಿತ್ತು. ಕೇವಲ 20 ಲಕ್ಷ ಮೂಲ ಬೆಲೆಹೊಂದಿದ್ದ ಕೋಲ್ಕತಾ ವೇಗಿಯನ್ನು ಬರೋಬ್ಬರಿ 1.5 ಕೋಟಿ ನೀಡಿ ಆರ್’ಸಿಬಿ ಖರೀದಿಸುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿತ್ತು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಕೋಟಿ ರುಪಾಯಿ ಬಾಚಿಕೊಂಡ ಅತಿ ಕಿರಿಯ ಕ್ರಿಕೆಟಿಗ ಎನ್ನುವ ಕೀರ್ತಿಗೂ ಬರ್ಮನ್ ಪಾತ್ರರಾಗಿದ್ದರು.

1. ಅಷ್ಟಕ್ಕೂ ಯಾರು ಈ ಪ್ರಯಾಸ್ ರೇ ಬರ್ಮಾನ್..?
ಪ್ರಯಾಸ್ ರೇ ಬರ್ಮಾನ್ ಬಲಗೈ ಲೆಗ್’ಸ್ಪಿನ್ನರ್ ಆಗಿದ್ದು, ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಅಕ್ಟೋಬರ್ 25, 2002ರಲ್ಲಿ ಜನಿಸಿದ್ದರು. ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬರ್ಮಾನ್ ತಂದೆ, ಡಾ. ಕೌಶಿಕ್ ರೇ ಬರ್ಮಾನ್ ಮಗನ ಕ್ರಿಕೆಟ್ ಆಸಕ್ತಿಯನ್ನು ಬಾಲ್ಯದಿಂದಲೇ ಪ್ರೋತ್ಸಾಹಿಸಿದರು.

2. ಡೆಲ್ಲಿ, ಬಂಗಾಳ ಈಗ ಬೆಂಗಳೂರು:
ಪಶ್ಚಿಮ ಬಂಗಾಳದಲ್ಲಿ ಜನಿಸಿದರೂ, ಕ್ರಿಕೆಟ್ ಅನ್ನು ವೃತ್ತಿಪರವಾಗಿಸಿಕೊಳ್ಳುವ ನಿಟ್ಟಿನಲ್ಲಿ ಡೆಲ್ಲಿಯತ್ತ ಮುಖಮಾಡಿದ್ದ ಬರ್ಮಾನ್, ಆ ಬಳಿಕ ಅಂಡರ್ 16 ಟೂರ್ನಿಯಲ್ಲಿ ಬಂಗಾಳ ತಂಡದಲ್ಲಿ ಸ್ಥಾನ ಪಡೆದು ಗಮನ ಸೆಳೆದರು. ಆರ್’ಸಿಬಿ ಬರ್ಮಾನ್ ಅವರನ್ನು ಖರೀದಿಸಿದ್ದರಿಂದ ಇದೀಗ ಬೆಂಗಳೂರನ್ನೇ ತನ್ನ ತವರನ್ನಾಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಬರ್ಮಾನ್ ಸಹೋದರಿ ಬೆಂಗಳೂರಿನಲ್ಲೇ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

3. ಬಂಗಾಳ ಅಂಡರ್ 15 ಪ್ರತಿನಿಧಿಸಿದ್ದ ಬರ್ಮಾನ್:
2012-13ರಲ್ಲಿ ಬಂಗಾಳ ಅಂಡರ್ 15 ತಂಡದಲ್ಲಿ ಸ್ಥಾನ ಪಡೆದಿದ್ದ ಬರ್ಮಾನ್ ಬಾಂಗ್ಲಾದೇಶ ವಿರುದ್ಧ 4 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸುವ ಮೂಲಕ ಗಮನಾರ್ಹ ಪ್ರದರ್ಶನ ತೋರಿದ್ದರು.

4. ಲಿಸ್ಟ್ ’ಎ’ನಲ್ಲೂ ಮಿಂಚು:
ಬರ್ಮಾನ್ 2018ರಲ್ಲಿ ಬಂಗಾಳ ಪರ ಲಿಸ್ಟ್ ’ಎ’ ಪಂದ್ಯಕ್ಕೂ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದರು. ವಿಜಯ ಹಜಾರೆ ಟೂರ್ನಿಯಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಆಡಿದ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೇ ಬಂಗಾಳ ಪರ ವಿಜಯ್ ಹಜಾರೆ ಟೂರ್ನಿಯಲ್ಲಿ 11 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. 

5.  ಶೇನ್ ವಾರ್ನ್ ಅಭಿಮಾನಿ:
6.1 ಅಡಿ ಎತ್ತರವಿರುವ ಪ್ರಯಾಸ್ ರೇ ಬರ್ಮಾನ್ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅಭಿಮಾನಿಯಂತೆ. ಬರ್ಮಾನ್ ಬೌಲಿಂಗ್ ನೋಡಿದ ಜನರು ಟೀಂ ಇಂಡಿಯಾ ದಿಗ್ಗಜ ಅನಿಲ್ ಕುಂಬ್ಳೆ ಅವರಿಗೆ ಹೋಲಿಸಿದ್ದೂ ಇದೆಯಂತೆ.

6. IPL ಟೂರ್ನಿಗೆ ಪದಾರ್ಪಣೆ ಮಾಡಿದ ಅತಿ ಕಿರಿಯ ಕ್ರಿಕೆಟಿಗ: 
ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುವ ಮೂಲಕ ಐಪಿಎಲ್’ಗೆ ಪದಾರ್ಪಣೆ ಮಾಡಿದ ಅತಿ ಕಿರಿಯ ಕ್ರಿಕೆಟಿಗ ಎನ್ನುವ ಕೀರ್ತಿಗೂ ಬರ್ಮನ್ ಪಾತ್ರವಾಗಿದ್ದರೆ. ಬರ್ಮಾನ್’ಗೆ ಇದೀಗ 16 ವರ್ಷ 157 ದಿನಗಳಾಗಿವೆ. ಈ ಮೊದಲು ಆಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ [17 ವರ್ಷ 11 ದಿನ] ಈ ದಾಖಲೆ ಹೊಂದಿದ್ದರು.