ತೀವ್ರ ಕುತೂಹಲ ಕೆರಳಿಸಿದ್ದ ಪ್ರೀ ಕ್ವಾರ್ಟರ್‌'ಫೈನಲ್ ಪಂದ್ಯದಲ್ಲಿ ಪ್ರಣಯ್, ಹಾಲಿ ಚಾಂಪಿಯನ್ ವಿಶ್ವದ ನಂ.3ನೇ ಶ್ರೇಯಾಂಕಿತ, ಮೂರು ಬಾರಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಆಟಗಾರ ಮಲೇಷ್ಯಾದ ಲೀ ಚಾಂಗ್ ವೀ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದರು.
ಜಕಾರ್ತ(ಜೂ.15): ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಭಾರತಕ್ಕಿಂದು ಮಿಶ್ರಫಲ ಎದುರಾಗಿದೆ.
ಭಾರತದ ಶಟ್ಲರ್'ಗಳಾದ ಎಚ್.ಎಸ್. ಪ್ರಣಯ್ ಮತ್ತು ಕಿದಾಂಬಿ ಶ್ರೀಕಾಂತ್, ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್'ಫೈನಲ್ ಹಂತಕ್ಕೇರಿದರೆ, ಮಹಿಳಾ ಸಿಂಗಲ್ಸ್ ಪ್ರೀ-ಕ್ವಾರ್ಟರ್ ಫೈನಲ್'ನಲ್ಲಿ ಸೋಲು ಕಂಡ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಪ್ರೀ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಪ್ರಣಯ್, ಹಾಲಿ ಚಾಂಪಿಯನ್ ವಿಶ್ವದ ನಂ.3ನೇ ಶ್ರೇಯಾಂಕಿತ, ಮೂರು ಬಾರಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಆಟಗಾರ ಮಲೇಷ್ಯಾದ ಲೀ ಚಾಂಗ್ ವೀ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದರು. 21-10, 21-18 ನೇರ ಗೇಮ್ಗಳಲ್ಲಿ ದಿಗ್ಗಜ ಚಾಂಗ್ ವೀ ಮಣಿಸಿದ ಪ್ರಣಯ್ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಕಳೆದೆರೆಡು ಮುಖಾಮುಖಿಗಳಲ್ಲಿ ಸೋಲು ಕಂಡಿದ್ದ ಪ್ರಣಯ್, ಇದೇ ಮೊದಲ ಬಾರಿಗೆ ಚಾಂಗ್ ವೀ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.
ಮತ್ತೊಂದು ಸಿಂಗಲ್ಸ್ ಪ್ರೀ ಕ್ವಾರ್ಟರ್ನಲ್ಲಿ ವಿಶ್ವದ 22ನೇ ಶ್ರೇಯಾಂಕಿತ ಶ್ರೀಕಾಂತ್ 21-15, 20-22, 21-16 ಗೇಮ್'ಗಳಿಂದ ವಿಶ್ವದ 9ನೇ ಶ್ರೇಯಾಂಕಿತ ಆಟಗಾರ ಡೆನ್ಮಾರ್ಕ್ನ ಜಾನ್ ಓ ಜಾರ್ಗನ್ಸನ್ ವಿರುದ್ಧ ಗೆಲುವು ಪಡೆದರು.
ಸೈನಾ, ಸಿಂಧುಗೆ ಆಘಾತ: ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ ಭಾರತದ ತಾರೆ ಸೈನಾ ನೆಹ್ವಾಲ್, 2ನೇ ಸುತ್ತಿನಲ್ಲಿ ಸೋತು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಇದೇ ವೇಳೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಸಹ 2ನೇ ಸುತ್ತಿನಲ್ಲಿ ಸೋತು ಆಘಾತ ಅನುಭವಿಸಿದ್ದಾರೆ.
ಸೈನಾನ ಥಾಯ್ಲೆಂಡ್ನ ನಿಚಾನ್ ಜಿಂದಾಪೊಲ್ ವಿರುದ್ಧ 15-21, 21-6, 16-21 ಗೇಮ್'ಗಳಿಂದ ಸೋತರೆ, ಅಮೆರಿಕದ ಬೀವೆನ್ ಝಾಂಗ್ ವಿರುದ್ಧ ಸಿಂಧು, 21-15, 12-21, 18-21 ಗೇಮ್ಗಳಿಂದ ಪರಾಭವಗೊಂಡರು.
