ಟೀಮ್ಇಂಡಿಯಾ ಕ್ರಿಕೆಟಿಗ ಎಮ್ ಎಸ್ ಧೋನಿ ಕಣದಲ್ಲಿದ್ದರೆ, ಅಲ್ಲೊಂದು ದಾಖಲೆ ನಿರ್ಮಿಸ್ತಾರೆ. ಇದೀಗ ಆನ್ ಫೀಲ್ಡ್ ಮಾತ್ರವಲ್ಲ, ಮೈದಾನದ ಹೊರಗೂ ಧೋನಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಹಾಗಾದರೆ ಧೋನಿ ಬರೆಯಲಿರುವ ನೂತನ ದಾಖಲೆ ಏನು ?
ಮುಂಬೈ(ಜೂ.16): ಟೀಮ್ಇಂಡಿಯಾ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಮ್ ಎಸ್ ಧೋನಿ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪುಣೆ ಮೂಲದ ಇಂಡಿಯೋ ಪೈಂಟ್ಸ್ ಕಂಪೆನಿಯ ರಾಯಭಾರಿಯಾಗಿರೋ ಎಮ್ ಎಸ್ ಧೋನಿ ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿ ದಾಖಲೆ ಬರೆದಿದ್ದಾರೆ.
ಮುಂದಿನ 3 ವರ್ಷಗಳ ಕಾಲ ಧೋನಿಯನ್ನ ಇಂಡಿಗೋ ಪೈಂಟ್ಸ್ ಕಂಪೆನಿಯ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇಂಡಿಗೋ ಕಂಪೆನಿ ತ್ವರಿತಗತಿಯಲ್ಲಿ ಅಭಿವೃದ್ದಿ ಕಾಣುತ್ತಿರುವ ಹಿನ್ನಲೆಯಲ್ಲಿ 3 ವರ್ಷಗಳ ಜಾಹೀರಾತಿಗಾಗಿ ಕಂಪೆನಿ ಬರೋಬ್ಬರಿ 240 ಕೋಟಿ ರೂಪಾಯಿ ವ್ಯಯಿಸಲು ಮುಂದಾಗಿದೆ. ಇದರಲ್ಲಿ ಧೋನಿ 3 ವರ್ಷಗಳ ಒಪ್ಪಂದಕ್ಕೆ 150 ಕೋಟಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂಡಿಗೋ ಪೈಂಟ್ಸ್ ಕಂಪೆನಿಯ ಪಯಣ, ಧೋನಿ ಜರ್ನಿಗೂ ಸಾಕಷ್ಟು ಸಾಮ್ಯತೆ ಇದೆ. ಇಂಡಿಗೋ ಕಂಪೆನಿ ಕೂಡ ಪುಟ್ಟ ಹಳ್ಳಿಯಲ್ಲಿ ಆರಂಭಗೊಂಡು ಇದೀಗ ದೇಶದೆಲ್ಲೆಡೆ ಕಂಪೆನಿ ಅಭಿವೃದ್ಧಿ ಹೊಂದಿದೆ. ಹೀಗಾಗಿ ಧೋನಿ ಸೂಕ್ತ ರಾಯಭಾರಿ ಎಂದು ಇಂಡಿಗೋ ಪೈಂಟ್ಸ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಜಲನ್ ಹೇಳಿದ್ದಾರೆ.
ಕಳೆದ ವರ್ಷ ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ 8 ವರ್ಷಗಳ ಪೂಮಾ ಕಂಪೆನಿ ಒಪ್ಪಂದಕ್ಕೆ 110 ಕೋಟಿ ರೂಪಾಯಿ ಪಡೆದಿದ್ದರು. ಇದು ಭಾರತೀಯ ಆಟಗಾರ ಪಡೆದ ಗರಿಷ್ಠ ಮೊತ್ತದ ಒಪ್ಪಂದವಾಗಿತ್ತು. ಇದೀಗ ಧೋನಿ ಆ ದಾಖಲೆ ಮುರಿಯೋ ಸಾಧ್ಯತೆ ಹೆಚ್ಚಿದೆ.
