Asianet Suvarna News Asianet Suvarna News

ಸರ್ಕಾರದ ಭರವಸೆಗೆ ಒಪ್ಪದ ಕುಸ್ತಿಪಟುಗಳು; ಬ್ರಿಜ್‌ಭೂಷಣ್‌ ವಿರುದ್ಧ ಇಂದು ಎಫ್‌ಐಆರ್‌?

* ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಮೇಲೆ ಗಂಭೀರ ಆರೋಪ
* ಕೊಲೆ ಬೆದರಿಕೆ, ಲೈಂಗಿಕ ಕಿರುಕುಳ, ಇತ್ಯಾದಿ ಆರೋಪ ಎದುರಿಸುತ್ತಿರುವ ಬ್ರಿಜ್‌ಭೂಷಣ್
* ಇಂದು ಬ್ರಿಜ್‌ಭೂಷಣ್ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವ ಸಾಧ್ಯತೆ

Indian Wrestler file FIR against WFI president Brij Bhushan kvn
Author
First Published Jan 20, 2023, 10:24 AM IST

ನವದೆಹಲಿ(ಜ.20): ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕೊಲೆ ಬೆದರಿಕೆ, ಲೈಂಗಿಕ ಕಿರುಕುಳ, ಇತ್ಯಾದಿ ಆರೋಪಗಳನ್ನು ಹೊರಿಸಿ ಖ್ಯಾತ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ 2ನೇ ದಿನವೂ ಮುಂದುವರಿಯಿತು. ಹಾಲಿ ಸಮಿತಿಯನ್ನು ವಿಸರ್ಜಿಸಿ ಕೂಡಲೇ ಹೊಸ ಸಮಿತಿ ಆಯ್ಕೆ ಮಾಡಬೇಕೆಂದು ಪಟ್ಟು ಹಿಡಿದಿರುವ ಕುಸ್ತಿಪಟುಗಳು, ಬೇಡಿಕೆ ಈಡೇರದಿದ್ದರೆ ಶುಕ್ರವಾರ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಕುಸ್ತಿಪಟುಗಳು ಹಾಗೂ ಸರ್ಕಾರದ ನಡುವೆ ಮಧ್ಯಸ್ಥಿಕೆ ವಹಿಸಲು ತಾರಾ ಕುಸ್ತಿಪಟು, ಬಿಜೆಪಿ ನಾಯಕಿ ಬಬಿತಾ ಫೋಗಾಟ್‌ ಪ್ರತಿಭಟನಾ ನಿರತರನ್ನು ಭೇಟಿಯಾಗಿ, ನ್ಯಾಯ ಒದಗಿಸುವ ಭರವಸೆ ನೀಡಿದರು. ‘ನಾನು ಮೊದಲು ಕುಸ್ತಿಪಟು, ಆನಂತರ ರಾಜಕಾರಣಿ. ಹೀಗಾಗಿ ನನಗೆ ನಿಮ್ಮ ನೋವಿನ ಅರಿವಿದೆ. ಸರ್ಕಾರದ ಜೊತೆ ಚರ್ಚಿಸಿ ಶೀಘ್ರದಲ್ಲೇ ಇದಕ್ಕೆ ಪರಿಹಾರ ದೊರಕಿಸುತ್ತೇನೆ’ ಎಂದಿದ್ದರು. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕುಸ್ತಿಪಟುಗಳಿಗೆ ಬಬಿತಾ ತಿಳಿಸಿದ ಬಳಿಕವೂ ಕುಸ್ತಿಪಟುಗಳು ಪ್ರತಿಭಟನೆ ನಿಲ್ಲಿಸಲಿಲ್ಲ. ವರದಿಗಳ ಪ್ರಕಾರ ಜ.22ರಂದು ನಡೆಯಲಿರುವ ಡಬ್ಲ್ಯುಎಫ್‌ಐ ವಾರ್ಷಿಕ ಸಭೆಯಲ್ಲಿ ಬ್ರಿಜ್‌ಭೂಷಣ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Ranji Trophy: ಮಯಾಂಕ್‌ ಅಗರ್‌ವಾಲ್ ಆಕರ್ಷಕ ದ್ವಿಶತಕ, ರಾಜ್ಯಕ್ಕೆ ಮುನ್ನಡೆ

ಖ್ಯಾತ ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ, ವಿನೇಶ್‌ ಫೋಗಟ್‌, ಸಾಕ್ಷಿ ಮಲಿಕ್‌ ಸೇರಿ ಪ್ರಮುಖರು ಜಂತರ್‌ ಮಂತರ್‌ನಲ್ಲಿ ಬುಧವಾರ ದಿಢೀರ್‌ ಧರಣಿ ಆರಂಭಿಸಿದ್ದರು. ಆದರೆ ಎಲ್ಲಾ ಆರೋಪಗಳನ್ನು ಬ್ರಿಜ್‌ಭೂಷಣ್‌ ನಿರಾಕರಿಸಿದ್ದು, ಯಾವುದೇ ತನಿಖೆಗೆ ಸಿದ್ಧ. ಆರೋಪ ಸಾಬೀತಾದರೆ ಗಲ್ಲಿಗೇರುತ್ತೇನೆ ಎಂದಿದ್ದರು

ಬ್ರಿಜ್‌ಭೂಷಣ್‌ಗೆ 24 ಗಂಟೆ ಗಡುವು:

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ಗೆ 24 ಗಂಟೆಗಳ ಒಳಗೆ ರಾಜೀನಾಮೆ ನೀಡುವಂತೆ ಕ್ರೀಡಾ ಸಚಿವಾಲಯ ಗಡುವು ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಗುರುವಾರ ಜಂತರ್ ಮಂತರ್‌ನಿಂದ ಕುಸ್ತಿಪಟುಗಳಿ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ರ ನಿವಾಸಕ್ಕೆ ತೆರಳಿ ಬ್ರಿಜ್‌ಭೂಷಣ್ ವಿರುದ್ದ ತಮ್ಮ ಆರೋಪಗಳ ಬಗ್ಗೆ ವಿವರಿಸಿ, ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸುವಂತೆ ಕೇಳಿಕೊಂಡರು. ಈ ಬಗ್ಗೆ ತನಿಖೆ ನಡೆಸುವುದಾಗಿ ಅನುರಾಗ್ ಠಾಕೂರ್ ಭರವಸೆ ನೀಡಿದ್ದಲ್ಲದೇ, ಬ್ರಿಜ್‌ಭೂಷಣ್‌ಗೆ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕುಸ್ತಿಪಟುಗಳ ಆರೋಪವೇನು?

* ಅಧ್ಯಕ್ಷ ಬ್ರಿಜ್‌ಭೂಷಣ್‌ನಿಂದ ಲೈಂಗಿಕ ಕಿರುಕುಳ
* ಕೋಚ್‌ಗಳಿಂದಲೂ ಕಿರುಕುಳ, ಜತೆ ನಿಲ್ಲದ ಫೆಡರೇಷನ್
* ಪ್ರಶ್ನಿಸಿದರೆ ಬ್ರಿಜ್‌ಭೂಷಣ್‌ರಿಂದ ಜೀವ ಬೆದರಿಕೆ
* ವೈಯುಕ್ತಿಕ ವಿಚಾರದಲ್ಲಿ ಮೂಗು ತೂರಿಸುವ ಫೆಡರೇಷನ್

ಸಂತೋಷ್‌ ಟ್ರೋಫಿ: ಅಂತಿಮ ಸುತ್ತಿಗೆ ರಾಜ್ಯ

ನವದೆಹಲಿ: 2022-23ರ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯ ಅಂತಿಮ ಸುತ್ತಿಗೆ ಕರ್ನಾಟಕ ತಂಡ ಪ್ರವೇಶ ಪಡೆದಿದೆ. ಆರಂಭಿಕ ಸುತ್ತಿನಲ್ಲಿ ಗುಂಪು ಒಂದರಲ್ಲಿದ್ದ ಕರ್ನಾಟಕ, 5 ಪಂದ್ಯಗಳಲ್ಲಿ 4 ಜಯ, 1 ಸೋಲಿನೊಂದಿಗೆ 12 ಅಂಕ ಪಡೆದು 2ನೇ ಸ್ಥಾನ ಪಡೆದಿತ್ತು. ಫೆ.10ರಿಂದ 20ರ ವರೆಗೂ ಒಡಿಶಾದಲ್ಲಿ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಕರ್ನಾಟಕ ‘ಎ’ ಗುಂಪಿನಲ್ಲಿ ಕೇರಳ, ಗೋವಾ, ಮಹಾರಾಷ್ಟ್ರ, ಒಡಿಶಾ ಜೊತೆ ಸ್ಥಾನ ಪಡೆದಿದೆ. ಆರಂಭಿಕ ಸುತ್ತಿನ ಗುಂಪು 6ರ ಪಂದ್ಯಗಳು ಬಾಕಿ ಇದ್ದು, ಅಗ್ರಸ್ಥಾನ ಪಡೆಯುವ ತಂಡ ಅಂತಿಮ ಸುತ್ತಿಗೇರಲಿದೆ. ಇನ್ನು ‘ಬಿ’ ಗುಂಪಿನಲ್ಲಿ ಬಂಗಾಳ, ಮೇಘಾಲಯ, ದೆಹಲಿ, ಸವೀರ್‍ಸಸ್‌, ರೈಲ್ವೇಸ್‌ ತಂಡಗಳಿವೆ. ಈ ಗುಂಪಿಗೆ ಗುಂಪು 2 ಅಥವಾ ಗುಂಪು 6ರ ರನ್ನರ್‌-ಅಪ್‌ ತಂಡ ಸೇರ್ಪಡೆಗೊಳ್ಳಲಿದೆ.

ಇಂಡಿಯಾ ಓಪನ್‌ನಲ್ಲಿ ಭಾರತದ ಸವಾಲು ಅಂತ್ಯ!

ನವದೆಹಲಿ: ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತೀಯ ಶಟ್ಲರ್‌ಗಳ ಅಭಿಯಾನ 2ನೇ ಸುತ್ತಿನಲ್ಲೇ ಕೊನೆಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ವರ್ಷ 2 ಚಿನ್ನದ ಪದಕ ಗೆದ್ದಿದ್ದ ಭಾರತ ಈ ಬಾರಿ ಶೂನ್ಯ ಸಾಧನೆ ಮಾಡಿದೆ.

ಗುರುವಾರ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಲಕ್ಷ್ಯ ಸೇನ್‌ ಡೆನ್ಮಾರ್ಕ್ನ ರಾಸ್ಮಸ್‌ ಗೆಮ್ಕೆ ವಿರುದ್ಧ 21-16, 15-21, 18-21 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಟೂರ್ನಿಯಲ್ಲಿ 2010, 2015ರಲ್ಲಿ ಚಾಂಪಿಯನ್‌ ಆಗಿದ್ದ ಸೈನಾ ನೆಹ್ವಾಲ್‌ ಚೀನಾದ ಚೆನ್‌ ಯು ಫೆ ವಿರುದ್ಧ 9-21, 12-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಪುರುಡರ ಡಬಲ್ಸ್‌ನಲ್ಲಿ ಪದಕದ ಭರವಸೆ ಹುಟ್ಟಿಸಿದ್ದ, ಹಾಲಿ ಚಾಂಪಿಯನ್ನರಾದ ಚಿರಾಗ್‌-ಸಾತ್ವಿಕ್‌ ಜೋಡಿ ಹಿಂದೆ ಸರಿಯಿತು. ಸಾತ್ವಿಕ್‌ ಗಾಯಗೊಂಡಿರುವ ಕಾರಣ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ವಿಷ್ಣುವರ್ಧನ್‌-ಕೃಷ್ಣಪ್ರಸಾದ್‌, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ ಜೋಡಿಯೂ ಸೋಲನುಭವಿಸಿತು.

Follow Us:
Download App:
  • android
  • ios