Ranji Trophy: ಮಯಾಂಕ್ ಅಗರ್‌ವಾಲ್ ಆಕರ್ಷಕ ದ್ವಿಶತಕ, ರಾಜ್ಯಕ್ಕೆ ಮುನ್ನಡೆ
ರಣಜಿ ಟ್ರೋಫಿ ಟೂರ್ನಿಯಲ್ಲಿ ಕೇರಳ ಎದುರು ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ
ಕೇರಳ ಎದುರು ಆಕರ್ಷಕ ದ್ವಿಶತಕ ಚಚ್ಚಿದ ನಾಯಕ ಮಯಾಂಕ್ ಅಗರ್‌ವಾಲ್
ಕೇರಳ ಎದುರು ಮೊದಲ ಇನಿಂಗ್ಸ್‌ನಲ್ಲಿ 68 ರನ್ ಮುನ್ನಡೆ ಗಳಿಸಿ ಮುನ್ನುಗ್ಗುತ್ತಿರುವ ಕರ್ನಾಟಕ
ತಿರುವನಂತಪುರಂ(ಜ.20): ನಾಯಕ ಮಯಾಂಕ್ ಅಗರ್‌ವಾಲ್ ಅಬ್ಬರದ ದ್ವಿಶತಕದ ನೆರವಿನಿಂದ ರಣಜಿ ಟ್ರೋಫಿ ಪಂದ್ಯದಲ್ಲಿ ಕೇರಳಕ್ಕೆ ಕರ್ನಾಟಕ ದಿಟ್ಟಉತ್ತರ ನೀಡಿದ್ದು, ಇನ್ನಿಂಗ್‌್ಸ ಮುನ್ನಡೆ ಸಾಧಿಸಿದೆ. ಆತಿಥೇಯ ತಂಡದ 342 ರನ್‌ಗೆ ಉತ್ತರವಾಗಿ ಬ್ಯಾಟ್ ಮಾಡುತ್ತಿರುವ ರಾಜ್ಯ ತಂಡ 3ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 410 ರನ್ ಕಲೆ ಹಾಕಿದ್ದು, 68 ರನ್ ಮುನ್ನಡೆ ಪಡೆದಿದೆ. ಪಂದ್ಯ ಡ್ರಾದತ್ತ ಮುಖ ಮಾಡಿದ್ದರೂ, ಕೊನೆ ದಿನವಾದ ಶುಕ್ರವಾರ ಮೊದಲ ಅವಧಿಯಲ್ಲೇ ಮತ್ತಷ್ಟು ರನ್ ಸೇರಿಸಿ, ಬೌಲರ್‌ಗಳು ಅಸಾಧಾರಣ ಪ್ರದರ್ಶನ ತೋರಿದರೆ ರಾಜ್ಯಕ್ಕೆ ಇನ್ನಿಂಗ್‌್ಸ ಗೆಲುವು ಸಾಧಿಸುವ ಅವಕಾಶವಿದೆ.
2ನೇ ದಿನ 2 ವಿಕೆಟ್‌ಗೆ 137 ರನ್ ಗಳಿಸಿದ್ದ ರಾಜ್ಯ ತಂಡ ಗುರುವಾರವೂ ಪ್ರಾಬಲ್ಯ ಸಾಧಿಸಿತು. 3ನೇ ವಿಕೆಟ್‌ಗೆ ನಿಕಿನ್ ಜೋಸ್-ಮಯಾಂಕ್ 151 ರನ್ ಜೊತೆಯಾಟವಾಡಿದರು. ನಿಕಿನ್ 54ಕ್ಕೆ ವಿಕೆಟ್ ಒಪ್ಪಿಸಿದರೆ, ಮನೀಶ್ ಪಾಂಡೆ(0) ಖಾತೆ ತೆರೆಯಲಿಲ್ಲ. ಆದರೆ 87 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದ ಮಯಾಂಕ್ ಆತಿಥೇಯ ಬೌಲರ್‌ಗಳನ್ನು ದಂಡಿಸಿದರು. ಶ್ರೇಯಸ್ ಗೋಪಾಲ್(48) ಜೊತೆ 5ನೇ ವಿಕೆಟ್‌ಗೆ 93 ರನ್ ಕಲೆಹಾಕಿದ ಮಯಾಂಕ್, 6ನೇ ವಿಕೆಟ್‌ಗೆ ಬಿ.ಆರ್.ಶರತ್ ಜೊತೆ 42 ರನ್ ಜೊತೆಯಾಟವಾಡಿ ತಂಡಕ್ಕೆ ಮುನ್ನಡೆ ಒದಗಿಸಿದರು. 360 ಎಸೆತಗಳಲ್ಲಿ 17 ಬೌಂಡರಿ, 5 ಸಿಕ್ಸರ್ ಒಳಗೊಂಡ 208 ರನ್ ಸಿಡಿಸಿ ಮಯಾಂಕ್ ಔಟಾದರು. ಶರತ್(47), ಶುಭಾಂಗ್ ಹೆಗ್ಡೆ(08) ಕ್ರೀಸ್‌ನಲ್ಲಿದ್ದು, ಕೊನೆ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IND vs NZ ಗಿಲ್ ಆಟಕ್ಕೆ ನ್ಯೂಜಿಲೆಂಡ್ ಗಲಿಬಿಲಿ, ಮೊದಲ ಏಕದಿನದಲ್ಲಿ ಭಾರತ ಜಯಶಾಲಿ!
ಸ್ಕೋರ್:
ಕೇರಳ 342/10,
ಕರ್ನಾಟಕ (3ನೇ ದಿನದಂತ್ಯಕ್ಕೆ) 410/6
(ಮಯಾಂಕ್ 208, ನಿಕಿನ್ 54, ಚಂದ್ರನ್ 2-87)
500 ರನ್: ಮಯಾಂಕ್ ಈ ಋುತುವಿನಲ್ಲಿ 500 ರನ್ ಪೂರ್ತಿಗೊಳಿಸಿದ ಕರ್ನಾಟಕದ 2ನೇ ಬ್ಯಾಟರ್. 9 ಇನ್ನಿಂಗ್ಸಲ್ಲಿ 583 ರನ್ ಕಲೆ ಹಾಕಿದ್ದಾರೆ. ಆರ್.ಸಮರ್ಥ್ 9 ಇನ್ನಿಂಗ್ಸ್‌ಗಳಲ್ಲಿ 522 ರನ್ ಗಳಿಸಿದ್ದಾರೆ.
ರಣಜಿ: 78 ರನ್ ಗುರಿ ರಕ್ಷಿಸಿಕೊಂಡ ವಿದರ್ಭ!
ನಾಗ್ಪುರ: ಭಾರತದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಮೊತ್ತ ರಕ್ಷಿಸಿಕೊಂಡು ಗೆಲುವು ಸಾಧಿಸಿದ ದಾಖಲೆಯನ್ನು ವಿದರ್ಭ ಬರೆದಿದೆ. ರಣಜಿ ಟ್ರೋಫಿಯ ‘ಡಿ’ ಗುಂಪಿನ ಪಂದ್ಯದಲ್ಲಿ ವಿದರ್ಭ ವಿರುದ್ಧ ಗೆಲುವಿಗೆ 73 ರನ್ ಗುರಿ ಪಡೆದಿದ್ದ ಗುಜರಾತ್ 33.3 ಓವರಲ್ಲಿ ಕೇವಲ 54ಕ್ಕೆ ಆಲೌಟಾಗಿ 18 ರನ್ ಸೋಲನುಭವಿಸಿತು. ಇದಕ್ಕೂ ಮೊದಲು 1948-49ರಲ್ಲಿ ದೆಹಲಿ ತಂಡದ ಗೆಲುವಿಗೆ 78 ರನ್ ಗುರಿ ನೀಡಿದ್ದ ಬಿಹಾರ 29 ರನ್ ಗೆಲುವು ಸಾಧಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಮಂಗಳವಾರ ಆರಂಭಗೊಂಡ ವಿದರ್ಭ-ಗುಜರಾತ್ ಪಂದ್ಯದ ಮೊದಲ ದಿನ 15, 2ನೇ ದಿನ 16 ವಿಕೆಟ್‌ಗಳು ಪತನಗೊಂಡಿದ್ದವು. ಗುರುವಾರ 9 ವಿಕೆಟ್ ಉರುಳಿತು.
ರಾಷ್ಟ್ರೀಯ ವನಿತಾ ಏಕದಿನ: ರಾಜ್ಯಕ್ಕೆ ಸತತ 2ನೇ ಜಯ
ಮುಂಬೈ: ರಾಷ್ಟ್ರೀಯ ಹಿರಿಯ ಮಹಿಳೆಯರ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದ್ದು, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಬುಧವಾರ ಆರಂಭಿಕ ಪಂದ್ಯದಲ್ಲಿ ಚಂಡೀಗಢವನ್ನು 8 ವಿಕೆಟ್‌ಗಳಿಂದ ಮಣಿಸಿದ್ದ ರಾಜ್ಯ ತಂಡ ಗುರುವಾರ ಅರುಣಾಚಲ ಪ್ರದೇಶ ವಿರುದ್ಧ ಬರೋಬ್ಬರಿ 270 ರನ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ರಾಜ್ಯ ತಂಡ 8 ವಿಕೆಟ್‌ಗೆ 356 ರನ್ ಕಲೆ ಹಾಕಿತು. ಶ್ರೇಯಾಂಕ ಪಾಟೀಲ್ 73, ಅದಿತಿ ರಾಜೇಶ್ 70 ರನ್ ಸಿಡಿಸಿದರೆ, ಶುಭಾ 19 ಎಸೆತಗಳಲ್ಲಿ 39 ರನ್ ಗಳಿಸಿದರು. ಬೃಹತ್ ಮೊತ್ತ ಬೆನ್ನತ್ತಿದ ಅರುಣಾಚಲ 33.2 ಓವರಲ್ಲಿ ಕೇವಲ 86 ರನ್‌ಗೆ ಆಲೌಟಾಯಿತು. ರಾಜ್ಯ ತಂಡ ಶನಿವಾರ 3ನೇ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಸೆಣಸಲಿದೆ.