ಭಾರತ ತಂಡಕ್ಕೆ ಸ್ಟ್ರೈಕರ್ ರಾಣಿ ರಾಮ್‌'ಪಾಲ್ ನಾಯಕಿಯಾಗಿದ್ದು, ಗೋಲ್‌'ಕೀಪರ್ ಸವಿತಾ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು(ಸೆ.04): ಇದೇ ಸೆ.8 ರಿಂದ 15ರ ವರೆಗೆ ನಡೆಯಲಿರುವ ಯುರೋಪ್ ಪ್ರವಾಸಕ್ಕಾಗಿ 18 ಮಂದಿ ಆಟಗಾರ್ತಿಯರ ಭಾರತ ಮಹಿಳಾ ಹಾಕಿ ತಂಡ ಮಂಗಳವಾರ ರಾತ್ರಿ ಇಲ್ಲಿನ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದೆ.
ಕಳೆದ ಮೂರು ವಾರಗಳಿಂದ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ದಲ್ಲಿ ತರಬೇತಿ ಪಡೆದಿರುವ ಮಹಿಳಾ ತಂಡ, ನೆದರ್'ಲೆಂಡ್'ನಲ್ಲಿ 4 ಪಂದ್ಯಗಳನ್ನಾಡಲಿದೆ. ಹಾಗೆ ಸೆ. 11 ಮತ್ತು 18 ರಂದು ಭಾರತ ಮಹಿಳಾ ತಂಡ, ಬೆಲ್ಜಿಯಂ ಕಿರಿಯ ಪುರುಷರ ತಂಡದ ಎದುರು ಆ್ಯಂಟ್ವರ್ಪ್ನಲ್ಲಿ ಸೆಣಸಲಿದೆ. ಭಾರತ ತಂಡಕ್ಕೆ ಸ್ಟ್ರೈಕರ್ ರಾಣಿ ರಾಮ್'ಪಾಲ್ ನಾಯಕಿಯಾಗಿದ್ದು, ಗೋಲ್'ಕೀಪರ್ ಸವಿತಾ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಕಿರಿಯ ವಿಭಾಗದ ಪುರುಷರ ಎದುರು ಆಡಲಿದ್ದೇವೆ. ಇದಕ್ಕಾಗಿ ಸಾಕಷ್ಟು ಕಠಿಣ ಅಭ್ಯಾಸದಲ್ಲಿ ತಂಡ ನಿರತವಾಗಿತ್ತು. ಬೆಲ್ಜಿಯಂ ಕಿರಿಯರ ರಾಷ್ಟ್ರೀಯ ತಂಡದ ಎದುರು ಭಾರತ ಮಹಿಳಾ ತಂಡದ ಆಟಗಾರ್ತಿಯರು ಆಡಲು ಉತ್ಸುಕರಾಗಿದ್ದಾರೆ. ಬೆಲ್ಜಿಯಂ, ಕಿರಿಯರ ಹಾಕಿ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿತ್ತು. ಪಂದ್ಯದಲ್ಲಿ ಉತ್ತಮ ಪೈಪೋಟಿ ಕಂಡುಬರಲಿದೆ ಎಂದು ರಾಣಿ ರಾಮ್ ಪಾಲ್ ಹೇಳಿದ್ದಾರೆ.
ಮುಂದಿನ ತಿಂಗಳು ಜಪಾನ್'ನಲ್ಲಿ ಏಷ್ಯಾಕಪ್ ಹಾಕಿ ಪಂದ್ಯಾವಳಿ ನಡೆಯಲಿದೆ. ಇದಕ್ಕಾಗಿ ಈ ಯುರೋಪ್ ಪ್ರವಾಸ ಭಾರತ ಮಹಿಳಾ ತಂಡಕ್ಕೆ ಮಹತ್ವದ್ದೆನಿಸಿದೆ.
