ಬ್ಯಾಂಗಳೂರ್ ಅಲ್ಲ ಬೆಂಗಳೂರು: ಕನ್ನಡಿಗರಿಗೆ ಕೊಹ್ಲಿ ಅಂದ್ರೆ ಇದಕ್ಕೇ ಪಂಚಪ್ರಾಣ
ಬೆಂಗಳೂರು ಜತೆಗಿನ ಒಡನಾಡಟದ ಬಗ್ಗೆ ವಿರಾಟ್ ಕೊಹ್ಲಿ ಮಾತು
ದಶಕದಿಂದ ಆರ್‌ಸಿಬಿ ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ
ಬೆಂಗಳೂರು ಯಾಕೆ ಇಷ್ಟ ಎನ್ನುವ ಗುಟ್ಟು ಬಿಚ್ಚಿಟ್ಟ ಕಿಂಗ್ ಕೊಹ್ಲಿ
ಬೆಂಗಳೂರು(ಜು.10): ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಸತತ 16 ಆವೃತ್ತಿಯಲ್ಲಿ ಒಂದೇ ತಂಡವನ್ನು ಪ್ರತಿನಿಧಿಸಿದ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದ 2023ರ ಐಪಿಎಲ್ ಟೂರ್ನಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ವಿರಾಟ್ ಕೊಹ್ಲಿ ಕಂಡ್ರೆ ಬೆಂಗಳೂರಿಗರಿಗೆ ಅಚ್ಚುಮೆಚ್ಚು ಅದೇ ರೀತಿ ಬೆಂಗಳೂರು ಅಂದ್ರೆ ವಿರಾಟ್ ಕೊಹ್ಲಿಗೂ ಅಚ್ಚುಮೆಚ್ಚು. ಇದೀಗ ಬೆಂಗಳೂರಿನ ಕುರಿತಂತೆ ವಿರಾಟ್ ಕೊಹ್ಲಿ ಪಾಡ್‌ಕಾಸ್ಟ್‌ನಲ್ಲಿ ಆಡಿದ ಮಾತುಗಳು ಇದೀಗ ಮತ್ತೊಮ್ಮೆ ಕೊಹ್ಲಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಪಾಡ್‌ಕಾಸ್ಟ್‌ನಲ್ಲಿ ನಮ್ಮ ಬೆಂಗಳೂರಿನ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ, "ಬ್ಯಾಂಗಳೂರು ಸಹಜವಾಗಿ ಸಾರಿ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ನನ್ನ ಜೀವನದ ಮೇಲೆ ಬೆಂಗಳೂರು ಮಹತ್ವದ ಪರಿಣಾಮ ಬೀರಿದೆ. ನಾನು ಆರಂಭದಲ್ಲೇ ಅಂಡರ್ 14, ಅಂಡರ್ 15 ಹಂತದಲ್ಲಿ ಬೆಂಗಳೂರಿನ ಎನ್‌ಸಿಎಗೆ ಅಭ್ಯಾಸ ಶಿಬಿರಕ್ಕೆ ಬಂದಿದ್ದೆ. ಆಗ ಒಂದು ಹಂತದಲ್ಲಿ ಎರಡರಿಂದ ಎರಡೂವರೆ ತಿಂಗಳ ಕಾಲ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದೆ. ಆಗಿನಿಂದಲೂ ನಾನು ಬೆಂಗಳೂರನ್ನು ನೋಡುತ್ತಾ ಬಂದಿದ್ದೇನೆ. ಆದರೆ ಐಪಿಎಲ್ ಆರಂಭವಾದ ಬಳಿಕ ಬೆಂಗಳೂರು ತಂಡದ ಪರವಾಗಿ ಸಾಕಷ್ಟು ವರ್ಷಗಳಿಂದ ಆಡುತ್ತಾ ಬಂದಿದ್ದೇನೆ. ನಾನು ಇದೇ ತಂಡದಲ್ಲಿ ಇಷ್ಟು ವರ್ಷಗಳ ಕಾಲ ಆಡಲು ಕಾರಣ, ನಾನು ಇಲ್ಲಿನ ವಾತಾವರಣ ಬಿಟ್ಟು ಬೇರೆ ವಾತಾವರಣದಲ್ಲಿ ಆಡಲು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ನಗರವು ಭಾರತದ ಬೇರೆಲ್ಲಾ ನಗರಗಳಿಗಿಂತ ವಿಭಿನ್ನ ಅನುಭವನ್ನು ನೀಡುತ್ತದೆ. ಇಲ್ಲಿಗೆ ಏರ್‌ಪೋರ್ಟ್‌ಗೆ ಬಂದಿಳಿದು ಹೋಟೆಲ್‌ಗೆ ಹೋಗುವಾಗ ಒಂದು ರೀತಿ ನಮ್ಮ ಮನೆಗೆ ಹೋಗುತ್ತಿರುವಂತ ಅನುಭವವಾಗುತ್ತದೆ ಎಂದು ವಿರಾಟ್ ಕೊಹ್ಲಿ ಬೆಂಗಳೂರಿನ ಅನುಭವನ್ನು ವರ್ಣಿಸಿದ್ದಾರೆ.
ಒನ್ ಡೇ ವಿಶ್ವಕಪ್ ಬಗ್ಗೆ ಮತ್ತೆ ಪಾಕಿಸ್ತಾನ ಕಿರಿಕ್..! ಪಾಕಿಸ್ತಾನದ ಕ್ರೀಡಾ ಸಚಿವ ತಕರಾರು..!
2008ರಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಟೂರ್ನಿಗೆ ಚಾಲನೆ ಸಿಕ್ಕಿತು. ಮೊದಲ ಆವೃತ್ತಿಯಿಂದಲೂ ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್ ಕೊಹ್ಲಿ ತನ್ನದೇ ಆದ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಇನ್ನು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆಯಲ್ಲೇ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಮಲ್ಲೇಶ್ವರದಲ್ಲಿರುವ ಶ್ರೀ ಸಾಗರ್ ಟಿಫನ್ ಸೆಂಟರ್(ಸಿಟಿಆರ್)ಗೆ ಭೇಟಿ ನೀಡಿ ಗಮನ ಸೆಳೆದಿದ್ದರು. ಅನುಷ್ಕಾ ಶರ್ಮಾ ಬೆಂಗಳೂರಿನಲ್ಲಿಯೇ ಬೆಳೆದಿದ್ದರಿಂದ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಹಾಗೂ ಬೆಂಗಳೂರು ಎಂದರೆ ಅಚ್ಚುಮೆಚ್ಚು.