ಗುಜರಾತ್‌ಗೆ ಚೊಚ್ಚಲ ರಣಜಿ ಟ್ರೋಫಿ ತಂದಿತ್ತ ಪಾರ್ಥೀವ್ ಪಟೇಲ್ ಅವರನ್ನು ಗಾಯಾಳು ಎಂದು ಎಂ.ಎಸ್.ಕೆ. ಪ್ರಸಾದ್ ನೇತೃತ್ವದ ಟೀಂ ಇಂಡಿಯಾ ಆಯ್ಕೆಸಮಿತಿ ಕೈಬಿಟ್ಟಿದೆ.

ನವದೆಹಲಿ(ಜ.31): ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ತೋರಿದ ಆಕರ್ಷಕ ಪ್ರದರ್ಶನದಿಂದ ತಮಿಳನಾಡು ತಂಡದ ನಾಯಕ, ಆರಂಭಿಕ ಅಭಿನವ್ ಮುಕುಂದ್ ಐದು ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಸೇರಿಕೊಂಡಿದ್ದರೆ, ಇತ್ತ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ರಾಜ್ಯದಿಂದ ಕರುಣ್ ನಾಯರ್ ಮತ್ತು ಕೆ.ಎಲ್. ರಾಹುಲ್ ಸ್ಥಾನ ಪಡೆದಿದ್ದಾರೆ.

ಹೈದರಾಬಾದ್‌ನಲ್ಲಿ ಇದೇ ತಿಂಗಳು 9ರಿಂದ ಆರಂಭವಾಗಲಿರುವ ಪಂದ್ಯದಲ್ಲಿ ಹದಿನಾರು ಮಂದಿ ಆಟಗಾರರ ಪೈಕಿ ಮುರಳಿ ವಿಜಯ್, ಅಜಿಂಕ್ಯ ರಹಾನೆ ಆಲ್ರೌಂಡರ್‌'ಗಳಾದ ಜಯಂತ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಮತ್ತು ವಿಕೆಟ್‌'ಕೀಪರ್ ವೃದಿಮಾನ್ ಸಾಹಗೂ ಸ್ಥಾನ ಕಲ್ಪಿಸಲಾಗಿದೆ.

ಆದರೆ, ಗುಜರಾತ್‌ಗೆ ಚೊಚ್ಚಲ ರಣಜಿ ಟ್ರೋಫಿ ತಂದಿತ್ತ ಪಾರ್ಥೀವ್ ಪಟೇಲ್ ಅವರನ್ನು ಗಾಯಾಳು ಎಂದು ಎಂ.ಎಸ್.ಕೆ. ಪ್ರಸಾದ್ ನೇತೃತ್ವದ ಟೀಂ ಇಂಡಿಯಾ ಆಯ್ಕೆಸಮಿತಿ ಕೈಬಿಟ್ಟಿದೆ.

ಅಂದಹಾಗೆ 2011ರ ಇಂಗ್ಲೆಂಡ್ ಪ್ರವಾಸದಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಮುಕುಂದ್, ಆ ಬಳಿಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲವಾಗಿದ್ದರು. ಈ ಋತುವಿನ ರಣಜಿಯಲ್ಲಿ 849 ರನ್ ಗಳಿಸಿರುವ ಮುಕುಂದ್, 14 ಇನ್ನಿಂಗ್ಸ್‌ಗಳಲ್ಲಿ ಏಳಕ್ಕೂ ಹೆಚ್ಚು ಬಾರಿ ಅರ್ಧಶತಕ ಬಾರಿಸಿದ್ದಾರೆ.

ತಂಡ ಇಂತಿದೆ

ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್, ವೃದ್ಧಿಮಾನ್ ಸಾಹ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಅಭಿನವ್ ಮುಕುಂದ್ ಮತ್ತು ಹಾರ್ದಿಕ್ ಪಾಂಡ್ಯ.