15 ದಿನಗಳಲ್ಲಿ ನಾಲ್ಕನೇ ಚಿನ್ನ ಗೆದ್ದ ಹಿಮಾ ದಾಸ್..!
ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಚಿನ್ನದ ಪದಕದ ಬೇಟೆ ಮುಂದುವರೆಸಿದ್ದು, ಕೇವಲ 15 ದಿನಗಳೊಳಗಾಗಿ ನಾಲ್ಕನೇ ಚಿನ್ನದ ಪದಕ ಜಯಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಜು.18]: ಚಿನ್ನದ ಪದಕದ ಬೇಟೆ ಮುನ್ನಡೆಸಿರುವ 19 ವರ್ಷದ ಅಸ್ಸಾಂ ಮೂಲದ ಟೀಂ ಇಂಡಿಯಾ ಸ್ಟಾರ್ ಅಥ್ಲೀಟ್ ಹಿಮಾ ದಾಸ್, ಕೇವಲ 15 ದಿನಗಳ ಅಂತರದಲ್ಲಿ ನಾಲ್ಕನೇ ಚಿನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಜೆಕ್ ಗಣರಾಜ್ಯದಲ್ಲಿ ನಡೆದ ತೋಬರ್ ಅಥ್ಲೀಟ್ ಕ್ರೀಡಾಕೂಟದ 200 ಮೀಟರ್ ಸ್ಪರ್ಧೆಯಲ್ಲಿ ಹಿಮಾ ದಾಸ್ ಚಿನ್ನದ ಪದಕ ಗೆಲ್ಲುವಲ್ಲಿ ಸಫಲರಾಗಿದ್ದಾರೆ.
11 ದಿನಗಳಲ್ಲಿ 3 ಚಿನ್ನ ಗೆದ್ದ ಹಿಮಾ ದಾಸ್!
ಹಿಮಾ ದಾಸ್ 23.25 ಸೆಕೆಂಡ್’ಗಳಲ್ಲಿ ಗುರಿ ಮುಟ್ಟುವ ಮೂಲಕ ಮೊದಲ ಸ್ಥಾನ ಪಡೆದರೆ, ಭಾರತದವರೇ ಆದ ವಿ.ಕೆ ವಿಸ್ಮಯ 23.43 ಸೆಕೆಂಡ್ ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
15 ದಿನಗಳ ಅಂತರದಲ್ಲಿ 4 ಚಿನ್ನ ಗೆದ್ದ ಹಿಮಾ:
ಜುಲೈ 02ರಂದು ಪೋಜ್ನಾನ್ ಗ್ರ್ಯಾಂಡ್ ಪ್ರಿಕ್ಸ್’ನಲ್ಲಿ ಚಿನ್ನ [200 ಮೀಟರ್]
ಜುಲೈ 07ರಂದು ಕುಟ್ನೋ ಅಥ್ಲೀಟಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನ [200 ಮೀಟರ್]
ಜುಲೈ 13 ಜೆಕ್ ಗಣರಾಜ್ಯದ ಕ್ಲಾಡ್ನೊ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನ [200 ಮೀಟರ್]
ಇದೀಗ ತೋಬರ್ ಅಥ್ಲೀಟ್ ಕ್ರೀಡಾಕೂಟದ 200 ಮೀಟರ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದಾರೆ.
ಇನ್ನು ಪುರುಷರ 400 ಮೀಟರ್ ಸ್ಪರ್ಧೆಯಲ್ಲಿ ಮೊಹಮದ್ ಅನಾಸ್ ಚಿನ್ನದ ಪದಕ ಜಯಿಸಿದರೆ, ಸಹ ಓಟಗಾರ ಟಾಮ್ ನೋಹ್ ನಿರ್ಮಲ್ ಬೆಳ್ಳಿ ಪದಕ ಜಯಿಸಿದರು.