ಭುವನೇಶ್ವರ್(ಜು.07): ಭಾರತದ ಪುರುಷರ ತಂಡ 4/100 ಮೀ ರಿಲೇಯಲ್ಲಿ ಒಬ್ಬ ಅಥ್ಲೀಟ್ ತಪ್ಪು ಮಾಡಿದ್ದರಿಂದ ಇಡೀ ರಿಲೇ ತಂಡವನ್ನೆ ಅನರ್ಹಗೊಳಿಸಲಾಗಿದೆ.

22ನೇ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌'ಶಿಪ್‌'ನಲ್ಲಿ ನಡೆದ ರಿಲೇ ಸ್ಪರ್ಧೆಯ ಕೊನೆಯ ಹಂತದಲ್ಲಿ ಬ್ಯಾಟನ್ ಬದಲಾಯಿಸುವ ವೇಳೆಯಲ್ಲಿ ಗೆರೆಯನ್ನು ಮತ್ತೊಬ್ಬ ಸ್ಪರ್ಧಿ ದಾಟಿದ್ದರಿಂದ ಪುರುಷರ ತಂಡವನ್ನು ಅನರ್ಹ ಮಾಡಲಾಗಿದೆ. ಭಾರತ ರಿಲೇ ತಂಡದಲ್ಲಿ ಜಾನ್ ಅನುರೂಪ್, ವಿ.ಕೆ. ಎಲಕ್ಕಿಯಾ ದಾಸನ್, ಜೆ. ದೇಬಾಂಗ್ ಮತ್ತು ಅಮಿಯಾ ಕುಮಾರ್ ಮಲ್ಲಿಕ್ ಸ್ಪರ್ಧಿಸಿದ್ದರು.

ಮೊದಲ ಮತ್ತು ಎರಡನೇ ಹಂತದಲ್ಲಿ ಎಲ್ಲಾವೂ ಸರಿಯಾಗಿತ್ತು. ಆದರೆ 3ನೇ ಹಂತದಲ್ಲಿ ದೇಬಾಂತ್, 4ನೇ ಹಂತದಲ್ಲಿ ಓಡುವ ಮಲ್ಲಿಕ್‌'ಗೆ ಬ್ಯಾಟನ್ ವರ್ಗಾಯಿಸುವಾಗ ನಿಗದಿತ ಗೆರೆ ಬಿಟ್ಟು ಬೇರೆ ಗೆರೆ ದಾಟಿದ್ದಾರೆ. ಮಲಿಕ್ ಕೊನೆಯ ಹಂತದ 100ಮೀ ಓಟದಲ್ಲಿ ಗೆರೆಯನ್ನು ಮೀರಿ ಓಡಿದ್ದಾರೆ. ಇದು ನಿಯಮ ಬಾಹಿರವಾಗಿದೆ ಎಂದು ತಂಡವನ್ನು ಅನರ್ಹ ಗೊಳಿಸಲಾಯಿತು.

ಈ ಸ್ಪರ್ಧೆಯಲ್ಲಿ ಚೀನಾದ ಅಥ್ಲೀಟ್‌'ಗಳು 39.06 ಸೆ.ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ, ಚೈನೀಸ್ ತೈಪೆಯ ಸ್ಪರ್ಧಿಗಳು 39.40 ಸೆ.ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ, ಥಾಯ್ಲೆಂಡ್ ಸ್ಪರ್ಧಿಗಳು 39.48 ಸೆ.ಗಳಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆದರು.