ಕಿರಿಯರ ಈ ಸಾಧನೆಯಿಂದ ಖುಷಿಗೊಂಡಿರುವ ಹಾಕಿ ಇಂಡಿಯಾ, ತಂಡದ ಪ್ರತೀ ಸದಸ್ಯನಿಗೂ 1 ಲಕ್ಷ ಬಹುಮಾನ ಹಾಗೂ ಕೋಚ್ ಹರೇಂದರ್ ಸಿಂಗ್ ಮತ್ತು ಬೆಂಬಲಿತ ಸಿಬ್ಬಂದಿಗೆ ತಲಾ 50 ಸಾವಿರ ಬಹುಮಾನ ಘೋಷಿಸಿದೆ.
ನವದೆಹಲಿ(ನ.01): ಪಂದ್ಯದ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಪರಾಕ್ರಮ ಮೆರೆದ ಭಾರತ ಹಾಕಿ ಕಿರಿಯರ ತಂಡ, ಜರ್ಮನಿ ವಿರುದ್ಧ 5-2 ಗೋಲುಗಳ ಗೆಲುವಿನೊಂದಿಗೆ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪಂದ್ಯದ 10ನೇ ನಿಮಿಷದಲ್ಲಿ ಪರ್ವೀಂದರ್ ಸಿಂಗ್ ಭಾರತಕ್ಕೆ ಮೊದಲ ಗೋಲು ತಂದಿತ್ತರೆ, ಇದಾದ ಹನ್ನೆರಡು ನಿಮಿಷಗಳ ಅಂತರದಲ್ಲಿ ಅರ್ಮಾನ್ ಖುರೇಷಿ ಬಾರಿಸಿದ ಗೋಲು ಪ್ರಥಮಾರ್ಧದಲ್ಲಿ ಭಾರತ 2-0 ಮುನ್ನಡೆ ಕಾಣುವಂತಾಯಿತು.
ಇನ್ನು ವಿರಾಮದ ಬಳಿಕವೂ ಭಾರತದ ಆಟಗಾರರು ಇನ್ನಷ್ಟು ಆಕ್ರಮಣಕಾರಿಯಾಗಿ ಸೆಣಸಾಡಿ, ಜರ್ಮನ್ನರ ಮೇಲೆ ಅತೀವ ಒತ್ತಡ ಬೀರಿದರು. ಅದರ ಫಲವಾಗಿ ಗುರ್ಜಾಂತ್ ಸಿಂಗ್ (40ನೇ ನಿ.) ಮತ್ತು ವರುಣ್ ಕುಮಾರ್ 44ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ಬಾರಿಸಿ 4-0 ಮುನ್ನಡೆಗೆ ಕಾರಣರಾದರು.
ಇತ್ತ ಗೋಲಿಗಾಗಿ ಪ್ರಬಲ ಹೋರಾಟ ನಡೆಸಿದ ಜರ್ಮನಿ ಖಾತೆ ತೆರೆದದ್ದು 46ನೇ ನಿಮಿಷದಲ್ಲಿ. ಫಿಲಿಪ್ ಶಿಮಿಡ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರೆ, 65ನೇ ನಿಮಿಷದಲ್ಲಿ ಸಿಕ್ಕ ಇನ್ನೊಂದು ಪೆನಾಲ್ಟಿ ಅವಕಾಶವನ್ನು ಇದೇ ಫಿಲಿಪ್ ಕೈಚೆಲ್ಲದೆ ಅಂತರವನ್ನು ತುಸು ತಗ್ಗಿಸಿದರು. ಆದರೆ, 69ನೇ ನಿಮಿಷದಲ್ಲಿ ಸಿಮ್ರನ್‌ಜಿತ್ ಸಿಂಗ್ ಮತ್ತೊಂದು ಗೋಲು ಹೊಡೆದದ್ದು ಭಾರತ ಮೂರು ಗೋಲುಗಳ ಅಂತರದಿಂದ ಜರ್ಮನಿಯನ್ನು ಮಣಿಸಿ ಚಾಂಪಿಯನ್ ಎನಿಸಿತು.
ಕಿರಿಯರ ಈ ಸಾಧನೆಯಿಂದ ಖುಷಿಗೊಂಡಿರುವ ಹಾಕಿ ಇಂಡಿಯಾ, ತಂಡದ ಪ್ರತೀ ಸದಸ್ಯನಿಗೂ 1 ಲಕ್ಷ ಬಹುಮಾನ ಹಾಗೂ ಕೋಚ್ ಹರೇಂದರ್ ಸಿಂಗ್ ಮತ್ತು ಬೆಂಬಲಿತ ಸಿಬ್ಬಂದಿಗೆ ತಲಾ 50 ಸಾವಿರ ಬಹುಮಾನ ಘೋಷಿಸಿದೆ. ಏತನ್ಮಧ್ಯೆ ಟೂರ್ನಿಯಾದ್ಯಂತ ಆಕರ್ಷಕ ಪ್ರದರ್ಶನ ನೀಡಿದ ವರುಣ್ ಕುಮಾರ್ ಮತ್ತು ಹರ್ಮನ್‌ಪ್ರೀತ್ ಸಿಂಗ್‌ಗೆ ತಲಾ 1 ಲಕ್ಷ ರೂ. ಹೆಚ್ಚುವರಿ ಬಹುಮಾನವಾಗಿ ನೀಡಿದೆ.
