ಪ್ರತಿಷ್ಠಿತ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾನೀರಜ್ ಚೋಪ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಲಾಸನ್ನೆಯಲ್ಲಿ ನಡೆದ ಕೊನೆಯ ಸುತ್ತಿನಲ್ಲಿ 89.08 ಮೀಟರ್ ದೂರ ನೀರಜ್ ಜಾವೆಲಿನ್ ಥ್ರೋ

ಲಾಸನ್ನೆ(ಆ.27): ಒಲಿಂಪಿಕ್ ಚಾಂಪಿಯನ್‌ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಡೈಮಂಡ್ ಲೀಗ್ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಲಾಸನ್ನೆಯಲ್ಲಿ ನಡೆದ ಕೊನೆಯ ಸುತ್ತಿನ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ಡೈಮಂಡ್‌ ಲೀಗ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. 

24 ವರ್ಷದ ನೀರಜ್‌ ಚೋಪ್ರಾ, ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗಷ್ಟೇ ಮುಕ್ತಾಯವಾದ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹೊರಗುಳಿದಿದ್ದರು. ಇನ್ನು ಕಳೆದ ತಿಂಗಳು ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಸಂದರ್ಭದಲ್ಲಿಯೇ ಅವರು ತೊಡೆಸಂದು ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ವೈದ್ಯಕೀಯ ಸಿಬ್ಬಂದಿಗಳ ಸಲಹೆಯ ಮೇರೆಗೆ ನೀರಜ್ ಚೋಪ್ರಾ, ಕೊನೆಯ ಕ್ಷಣದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹಿಂದೆ ಸರಿಯುವ ತೀರ್ಮಾನ ಪ್ರಕಟಿಸಿದ್ದರು. 

ಇದೀಗ ಡೈಮಂಡ್ಸ್‌ ಲೀಗ್ ಕ್ರೀಡಾಕೂಟದ ಲಾಸನ್ನೆ ಚರಣದ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಬರೋಬ್ಬರಿ 89.08 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಪ್ರಯತ್ನದಲ್ಲಿ 85.18 ಮೀಟರ್ ದೂರ ಎಸೆದಿದ್ದ ನೀರಜ್ ಚೋಪ್ರಾ, ಮೂರನೇ ಪ್ರಯತ್ನದಲ್ಲಿ 89.08 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Scroll to load tweet…

ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಜೂನ್ ಮೊದಲ ವಾರದಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 89.30 ದೂರಕ್ಕೆ ಜಾವೆಲಿನ್‌ ಎಸೆದು ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು

ಏನಿದು ಡೈಮಂಡ್ ಲೀಗ್ ಟೂರ್ನಿ?

ಇದು ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದು ಎನಿಸಿದ್ದು, ಇದು ಸ್ಟಾಕ್‌ಹೋಮ್‌ನಲ್ಲಿ ಕಳೆದ ಜೂನ್ 30ರಂದು ಆರಂಭವಾಗಿತ್ತು. 2022ರಲ್ಲಿ ಒಟ್ಟು 13 ಡೈಮಂಡ್ ಲೀಗ್ ಟೂರ್ನಿಗಳು ನಡೆಯಲಿದ್ದು, ಈ ಪೈಕಿ 5 ಟೂರ್ನಿಗಳು ಪುರುಷರ ಜಾವೆಲಿನ್ ಥ್ರೋಗೆ ಸಂಬಂಧಿಸಿದವುಗಳಾಗಿವೆ. ಈಗಾಗಲೇ ಮೇ ತಿಂಗಳಿನಲ್ಲಿ ದೋಹಾದಲ್ಲಿ ಮೊದಲ ಡೈಮಂಡ್ ಲೀಗ್ ನಡೆದಿತ್ತು, ಇದಾದ ಬಳಿಕ ಸ್ಟಾಕೋಹೋಮ್, ಸಿಲಿಸಿಯಾ, ಮೊನ್ಯಾಕೊ ಹಾಗೂ ಲಾಸನ್ನೆಯಲ್ಲಿ ಇನ್ನುಳಿದ ನಾಲ್ಕು ಡೈಮಂಡ್ ಲೀಗ್‌ಗಳು ನಡೆದವು